Taking too long? Close loading screen.

Shree Samsthan Gokarn Partagali Jeevottam Math

PL-logo--146x119A

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

14 Shri Bhuvijayaramachandra Kannada

ಶ್ರೀ ಭೂವಿಜಯರಾಮಚಂದ್ರ ತೀರ್ಥ

ದೀಕ್ಷಾಗುರು : ಶ್ರೀ ಶ್ರೀಕಾಂತ ತೀರ್ಥ (೧೩)
ಶಿಷ್ಯಸ್ವೀಕಾರ : ಶ್ರೀ ರಮಾನಾಥ ತೀರ್ಥ (೧೫)
ಮಹಾನಿರ್ವಾಣ : ಶ್ರೀ ಶಕೆ ೧೭೨೫ ರುದಿರೋದ್ಘಾರಿ ಸಂವತ್ಸರ ಮಾರ್ಗಶೀರ್ಷ ಶುಕ್ಲ ನವಮಿ ಬುಧವಾರ

(೨೩-೧೧-೧೮೦೩)

ವೃಂದಾವನ ಸ್ಥಳ : ಶ್ರೀ ವೀರವಿಠ್ಠಲ ಮಠ ಅಂಕೋಲಾ
ಗುರುಪೀಠ ಕಾಲಾವಧಿ : ೧೭ ವರ್ಷ ೦೪ ತಿಂಗಳು ೧೯ ದಿನಗಳು
ಮಠ ಸ್ಥಾಪನೆ : ೧ ಯಲ್ಲಾಪುರ ಮಠ ಸುಮಾರು ೧೭೯೦ರಲ್ಲಿ

೨ ಅವರ್ಸಾ ಮಠ ಶ್ರೀಶಕೆ ೧೭೨೨ ರೌದ್ರ ಸಂವತ್ಸರ ಮಾಘ ಶುಕ್ಲ ೫ ಮೀ (೧೯-೦೧-೧೮೦೧)

ಸ್ವಾಮೀಜಿಯ ಇತಿಹಾಸ

ವ್ಯಾರಾಜಮಠಾಧೀಶಲಕ್ಷ್ಮೀನಾಥಯತಿಪ್ರಿಯಮ್ ।
ಭೂತ್ಯೈ ಭೂವಿಜಯಂ ರಾಮಚಂದ್ರಯೋಗೀನ್ದ್ರಮಾಶ್ರಯೇ॥
ಮಠದಲ್ಲಿನ ದಾಖಲೆಗಳನ್ನು ಪರಿಶೀಲಿಸಿದಾಗ ಶ್ರೀಭೂವಿಜಯರಾಮಚಂದ್ರತೀರ್ಥರ ಕಾಲಾವಧಿಯು ೧೭೦೦ ರಿಂದ ೧೭೨೫ ರವರೆಗೆ ಇರಬಹುದೆಂದು ಹೇಳಬಹುದು. ಮಠಪರಂಪರೆಯ ಹದಿನಾಲ್ಕನೆಯ ಯತಿವರ್ಯ ಶ್ರೀ ಭೂವಿಜಯ ರಾಮಚಂದ್ರ ತೀರ್ಥರು ಶ್ರೀ ಶ್ರೀಕಾಂತತೀರ್ಥರ ಶಿಷ್ಯರು. ಅವರು ಪರ್ತಗಾಳಿ ಮಠದಲ್ಲಿ ಸಂನ್ಯಾಸದೀಕ್ಷೆ ಪಡೆದರು. ಶ್ರೀ ಭೂವಿಜಯರಾಮಚಂದ್ರ ತೀರ್ಥರು ಶಕೆ ೧೭೦೦ ರಲ್ಲಿ ನಗರಸೆಯಲ್ಲಿ ಎರಡು ಆಸ್ತಿಗಳನ್ನು ಮತ್ತು ೧೭೦೩ ರಲ್ಲಿ ಒಂದನ್ನು ಸಂಸ್ಥಾನಕ್ಕಾಗಿ ಖರೀದಿಸಿದರು. ಶ್ರೀ ಭೂವಿಜಯ ರಾಮಚಂದ್ರ ತೀರ್ಥರು ೧೭೨೦ರಲ್ಲಿ ತೀರ್ಥಯಾತ್ರೆಮಾಡಿದರು ಎಂಬುದನ್ನು ಒಂದು ಪತ್ರದಲ್ಲಿ ಉಲ್ಲೇಖ ಸಿಗುತ್ತದೆ. ತಿರುಪತಿ, ರಾಮೇಶ್ವರ, ಮೈಸೂರು, ಮೂಲಕ ಪೊಡ್ನೂರಿಗೆ ಬಂದರು. ಅಲ್ಲಿಯ ಮಹಾರಾಜರು ಅವರಿಗೆ ಬಹಳ ಗೌರವ ಸಲ್ಲಿಸಿದರು ಮತ್ತು ಕುಂಭಕೋಣಂನ ಸ್ವಾಮೀಜಿಯವರನ್ನು ಭೇಟಿಯಾದರು. ಅಲ್ಲಿಯ ದೇಶಸ್ಥರೂ ಕೂಡ ಕಾಣಿಕೆಗಳನ್ನು ನೀಡಿ ಬೀಳ್ಕೊಟ್ಟರು. ಶಿರಶಿಗೆ ಭೇಟಿ ನೀಡಿದಾಗ ಸ್ವಾಮೀಜಿಯವರನ್ನು ಆ ಭಾಗದ ಸ್ವಸಮಾಜ ಬಾಂಧವರು ಅದ್ಧೂರಿಯಾಗಿ ಸ್ವಾಗತಿಸಿದರು. ಈ ವಾರ್ತೆಯು ಕರ್ನಾಟಕದ ದೇಶಸ್ಥ ಶ್ರೀ ವ್ಯಾಸರಾಜಮಠದ ಪ್ರವರ್ತಕರಾದ ಶ್ರೀ ಲಕ್ಷ್ಮೀನಾಥತೀರ್ಥ ಸ್ವಾಮೀಜಿಯವರಿಗೆ ತಿಳಿದು ಅವರಿಗೆ ಬಹಳ ಸಂತೋಷವಾಯಿತು ಮತ್ತು ಅವರು ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ವೆಂಕಪ್ಪನ ಮುಖಾಂತರ ತಮ್ಮ ಮಠದ ಪಾರುಪತ್ಯಗಾರರಾದ ಶ್ರೀ ವೆಂಕಟ ಕೃಷ್ಣಾಚಾರ್ಯ ಮತ್ತು ಇತರೇ ಕೆಲವು ಅನುಯಾಯಿಗಳನ್ನೂ ಕಳುಹಿಸಿ ಶ್ರೀ ಭೂವಿಜಯರಾಮಚಂದ್ರ ತೀರ್ಥರನ್ನು ತಮ್ಮ ಮಠಕ್ಕೆ ಬರುವಂತೆ ಆಮಂತ್ರಣ ನೀಡಿದರು ಮತ್ತು ತಮ್ಮ ಮಠಕ್ಕೆ ಬರಮಾಡಿಕೊಂಡು ಉನ್ನತವಾದ ಆಸನದಲ್ಲಿ ಕುಳ್ಳಿರಿಸಿ ಯಥೋಚಿತ ಗೌರವಿಸಿ ಒಂದು ಜೋಡಿ ಕಾಶ್ಮಿರಿ ಶಾಲನ್ನು ಅರ್ಪಿಸಿದರು. ನಂತರ ಶ್ರೀ ಭೂವಿಜಯ ರಾಮಚಂದ್ರ ತೀರ್ಥರೂ ಸಹ ಶ್ರೀಲಕ್ಷ್ಮೀನಾಥ ತೀರ್ಥರನ್ನು ತಮ್ಮ ಮಠಕ್ಕೆ ಆಮಂತ್ರಿಸಿ ಅದೇ ರೀತಿಯಲ್ಲಿ ಆದರಪೂರ್ವಕ ಸತ್ಕಾರವನ್ನು ಮಾಡಿ ಸನ್ಮಾನಿಸಿದರು. ಈ ವಿಷಯವನ್ನು ಸ್ವತಃ ಸ್ವಾಮೀಜಿಯವರೇ ತಮ್ಮ ಶಿಷ್ಯ ಶ್ರೀ ರಮಾನಾಥ ತೀರ್ಥರಿಗೆ ಬರೆದ ಪತ್ರದಲ್ಲಿ ಉಲ್ಲೆಖಿಸಿದ್ದಾರೆ. ಶ್ರೀ ಭೂವಿಜಯರಾಮಚಂದ್ರ ತೀರ್ಥರು ಅಧಿಕ ಪೌಷ ಶುದ್ಧ ಪೌರ್ಣಿಮೆ ಶಕೆ ೧೭೨೩ ರಂದು ಅವರ ಶಿಷ್ಯರಿಗೆ ಬರೆದ ಪತ್ರದಲ್ಲಿ, ತಾವು ಯಾತ್ರೆ ಮಾಡಿದ ಸ್ಥಳಗಳು, ಯಾತ್ರೆಯಲ್ಲಿ ಆದ ಅನುಭವ, ಕಂಪನಿ ಸರಕಾರದವರು ತಮ್ಮ ಛತ್ರ, ಚಾಮರ, ಪಲ್ಲಕ್ಕಿ ಮತ್ತು ಇತರೇ ಸರಂಜಾಮುಗಳನ್ನು ಬಳಸಲು ಹಳೆಯ ಹೈದರ ಮತ್ತು ಟಿಪ್ಪು ರಾಜ್ಯದಲ್ಲಿ ಸಹ ಇಲ್ಲದ ನಿರ್ಬಂಧಗಳನ್ನು ಯಾವ ರೀತಿಯಲ್ಲಿ ಹೇರಿದರು, ಅಲ್ಲಿಯ ದ್ರವಿಡ ಬ್ರಾಹ್ಮಣರು ಹೇಗೆ ಕುಚೋದ್ಯಗಳನ್ನು ಮಾಡಿದರು, ಲಿಂಗಾಯತರು ಯಾವ ರೀತಿಯಲ್ಲಿ ಉಪದ್ರವ ಕೊಟ್ಟರು ಇತ್ಯಾದಿ ಎಲ್ಲಾ ಘಟನೆಗಳನ್ನು ವಿವರಿಸಿದ ನಂತರ ಈ ರೀತಿಯ ಸೂಚನೆಯನ್ನು ನೀಡಿದರು. "ಹಾಗಾದರೆ ನೀವು ಮುಂಬೈ ಮಹಾರಾಜ ಶ್ರೀ ಇಂಗ್ಲಿಷ್ ಜನರಲ್ ಇವರಿಗೆ ಪುರಾತನ ಕಾಲದಿಂದ ನಡೆದು ಬಂದಂತೆ ಕಂಪನಿಯ ರಾಜ್ಯದಲ್ಲಿ ಬರ ಹೋಗುವ ಬಹುಮಾನ ಪುರಸ್ಸರಗಳನ್ನು ನಡೆಸಿಕೊಂಡು ಬರುವಂತೆ ಅಧಿಕೃತ ಪತ್ರವನ್ನು ಅವರ ಕ್ಯಾಪ್ಟನ್ ಮತ್ತು ಕರ್ನಲ್ ಇವರಿಗೆ ಬರೆದು ಕಳುಹಿಸಬೇಕು” ಅಧಿಕಾರ ವಹಿಸಿಕೊಂಡ ನಂತರ ಶ್ರೀ ಭೂವಿಜಯರಾಮಚಂದ್ರ ತೀರ್ಥರು ಮಠಕ್ಕೆ ನಿಯಮಿತ ಆದಾಯ ಬರಬೇಕು ಎಂದು ಮಠದ ಅನುಯಾಯಿಗಳಿಂದ ವಾರ್ಷಿಕ ಕಾಣಿಕೆ ಅದರಂತೆ ಪ್ರಾಯಶ್ಚಿತ್ತ ಕಾಣಿಕೆ ಇತ್ಯಾದಿಗಳ ಬಗ್ಗೆ ನಮೂದಿಸಿ ಆದಾಯವನ್ನು ಬರುವಂತೆ ಮಾಡಿದರು. ಶ್ರೀಶಕೆ ೧೭೧೩ ರ ಪೌಷ್ಯ ವದ್ಯ ಪಂಚಮಿಯಂದು ಪೇಶ್ವೆಯವರ ಕರ್ನಾಟಕದ ಸುಭೇದಾರರಿಗೆ ಆದೇಶ ನೀಡಲಾಗಿದೆ. ಈ ಸಮಯದಲ್ಲಿ ಪೂಣೆಯಲ್ಲಿ ಸವಾಯಿ ಮಾಧವರಾವ್ ಅವರ ಆಳ್ವಿಕೆ ನಡೆಯುತ್ತಿತ್ತು ಮತ್ತು ನಾನಾ ಪಡ್ನವೀಸ್ ಅವರು ಕಾರಭಾರಿಯಾಗಿದ್ದರು. ಸದಾಶಿವಗಡ, ಕೂರ್ಮಗಡ ಕೋಟೆಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳು ಮರಾಠರ ಕಡೆಯಲ್ಲಿ ಇತ್ತು. ಗಂಗಾಧರ ಗೋವಿಂದ ಅವರ ಸಹಿ ಇರುವ ಪರವಾನಿಗೆ ಬಂದಿತು. ಅದರಲ್ಲಿ” ಪರಮಹಂಸ ಶ್ರೀಪಾದ ಭೂವಿಜಯರಾಮಚಂದ್ರ ತೀರ್ಥ ಸ್ವಾಮಿಗಳು ಪರ್ತಗಾಳಿಯಿಂದ ಕರ್ನಾಟಕ ಪ್ರಾಂತಕ್ಕೆ ಹೋಗಲಿದ್ದು ಅವರನ್ನು ಸಂಚಾರದಲ್ಲಿ ಅವಿರೋಧಿಸಬಾರದು ಎಂಬ ಹುಕುಂ ಪತ್ರದಲ್ಲಿ ತಮ್ಮ ಸಿಪಾಯಿಗಳಿಗೆ ಆದೇಶ ನೀಡಿದ್ದರು. ಈ ಘಟನೆಯಂತೆಯೇ ಭಾರತದ ರಾಜಕೀಯದ ದೃಷ್ಟಿಯಿಂದ ಇನ್ನೊಂದು ಮಹತ್ವದ ಘಟನೆಯೂ ಈ ಆಚಾರ್ಯರ ಆಳ್ವಿಕೆಯಲ್ಲಿ ನಡೆಯಿತು. ಅದು ಮರಾಠರ ಕೊನೆಯ ಮತ್ತು ಬ್ರಿಟಿಶರ ಉದಯಕಾಲವಾಗಿತ್ತು. ೧೭೯೬ ರಲ್ಲಿ ಎರಡನೇ ಬಾಜಿರಾಯರು ಪಟ್ಟಕ್ಕೆ ಬಂದರು. ನಾನಾ ಫಡ್ನವಿಸ್ ೧೮೦೦ ರಲ್ಲಿ ನಿಧನರಾದರು, ಮತ್ತು ನಂತರ ಪೇಶ್ವೆಯವರ ಆಳ್ವಿಕೆ ವಿನಾಶದ ಅಂಚಿಗೆ ತಲುಪಿತು. ಶ್ರೀ ರಾಮಚಂದ್ರತೀರ್ಥರ ಕಾರ್ಯಕಾಲವು ಶಕೆ ೧೭೨೫ ರವರೆಗೆ ಇರಬೇಕಿತ್ತು. (ಸನ್ ೧೮೦೩)ರಲ್ಲಿ ಅವರ ಕಾರ್ಯಕಾಲ ಮುಗಿಯಿತು. ಅದಕ್ಕಿಂತ ಮೂರು ವರ್ಷಗಳ ಪೂರ್ವದಲ್ಲಿ, ಮರಾಠಾ ಶಾಹಿಯ ಬುದ್ಧಿವಂತಿಕೆಯು ನಾನಾ ಫಡ್ನವೀಸರ ರೂಪದಲ್ಲಿ ಕೊನೆಗೊಂಡಿತು ಮತ್ತು ಅದು ವಿನಾಶದ ಹಾದಿಯಲ್ಲಿ ಸಾಗುತ್ತಿತ್ತು. ಇದರ ಪರಿಣಾಮವಾಗಿ ಬ್ರಿಟಿಷರ ಆಳ್ವಿಕೆ ಭಾರತದಾದ್ಯಂತ ಹರಡಿತು. ದಕ್ಷಿಣದಲ್ಲಿ ಟಿಪ್ಪುವಿನ ಸೋಲು ಬ್ರಿಟಿಶರನ್ನು ಕರ್ನಾಟಕಕ್ಕೆ ಕರೆತಂದಿತು ಮತ್ತು ಇದರ ಪರಿಣಾಮವಾಗಿ ಪರ್ತಗಾಳಿ ಮಠವು ಪೋರ್ಚುಗೀಸ ಸಾಮ್ರಾಜ್ಯದ ಆಡಳಿತಕ್ಕೆ ಸೇರಿತು ಮತ್ತು ದಕ್ಷಿಣದಲ್ಲಿ ಗೋಕರ್ಣ, ಭಟ್ಕಳ ಇತ್ಯಾದಿ ಮಠಗಳು, ಅಷ್ಟೇ ಅಲ್ಲ ಶ್ರೀಮನ್ಮಧ್ವಾಚಾರ್ಯರ ಉಡುಪಿಯ ಅಷ್ಟ ಮಠಗಳು ಇಂಗ್ಲೀಶರ ರಾಜ್ಯದ ಪಾಲಾದವು. ಈ ಸಂಗತಿಗಳು ಶ್ರೀ ಭೂವಿಜಯ ರಾಮಚಂದ್ರತೀರ್ಥರ ಕಾಲದಲ್ಲಿ ನಡೆದವು. ಇದಾದ ನಂತರ ಶ್ರೀ ಭೂವಿಜಯರಾಮಚಂದ್ರ ತೀರ್ಥರು ಶಕೆ ೧೭೨೪ ಭಾದ್ರಪದ ಶುಕ್ಲ ಅಮಾವಾಸ್ಯೆ ಯಂದು ಕಾಶಿ, ಪ್ರಯಾಗ, ನರ್ಮದಾತೀರ, ಗೋದಾತೀರ, ಜಗನ್ನಾಥಪುರಿ, ಮುಂಬೈ, ರಾಜಾಪುರ, ಶಹಾಪುರ, ಖಾನಾಪುರ, ಗೋಮಾಂತಕದ ಮೂಲಕ ದಕ್ಷಿಣ ಮತ್ತು ಉತ್ತರ ಮತ್ತು ಕನ್ನಡ ಜಿಲ್ಲೆಗಳು ಮತ್ತು ಕೊಚ್ಚಿ, ತಲ್ಚೇರಿ, ತಿರುಪತಿ, ರಾಮೇಶ್ವರದಿಂದ ತಮ್ಮ ಎಲ್ಲಾ ಶಿಷ್ಯಂದಿರರಿಗೆ ರಾಯಸ ಕಳುಹಿಸಿ. “ವಿದ್ಯಾನಗರ ಕರ್ನಾಟಕ ಸಿಂಹಾಸನಾಧೀಶ್ವರ ಸಂಸ್ಥಾನಾಧಿಪತಿ ಶ್ರೀ ಲಕ್ಷ್ಮೀನಾಥ ತೀರ್ಥ ಶ್ರೀಪಾದ ಇವರ ಮತ್ತು ನಮ್ಮ ಗುರುಪರಂಪರಾಭ್ಯ ಸ್ನೇಹ ಸಂಬಂಧ ಇರುತ್ತಿದ್ದು ಅವರು ದಿಗ್ವಿಜಯಕ್ಕಾಗಿ ನಿಮ್ಮ ಪ್ರಾಂತ್ಯಕ್ಕೆ ಬಂದರೆ, ಅವರನ್ನು ಭಕ್ತಿ ಮತ್ತು ಗೌರವದಿಂದ ಕಂಡು ಅವರೊಂದಿಗೆ ಸಮಾಲೋಚಿಸಬೇಕು. ಇವರ ಮಠದಲ್ಲಿ ಇತ್ತೀಚೆಗೆ ಕಳ್ಳತನವಾಗಿದೆ. ಆದುದರಿಂದ ಅನುಕೂಲತೆಗೆ ತಕ್ಕಂತೆ ಅವರಿಗೆ ದ್ರವ್ಯಸಹಾಯ ಮಾಡುವದು” ಎಂದು ತಿಳಿಸಿದ್ದಾರೆ. ಶ್ರೀ ಭೂವಿಜಯರಾಮಚಂದ್ರತೀರ್ಥರ ಹೆಸರಿನ ಕನ್ನಡದಲ್ಲಿ ಬರೆದ ಕೊನೆಯ ಪತ್ರ ಶಕೆ ೧೭೨೫ ಜ್ಯೇಷ್ಠ ಕೃಷ್ಣ ನವಮಿಯದ್ದಾಗಿದೆ. ಮೇಲೆ ಉಲ್ಲೇಖಿಸಿದ ಕನ್ನಡದ ಪತ್ರದ ನಂತರ ಲಭ್ಯವಿರುವ ಪತ್ರವೆಂದರೆ ಅದು ಶಕೆ ೧೭೨೫ ಆಷಾಢ ಶುದ್ಧ-೮ ರಂದು ತಾಳಗಾಂವ ಪಣಜಿ ಮುಕ್ಕಾಮಿನಿಂದ ಕೆಲವೊಂದು ಗ್ರಾಮೀಣ ವಿಷಯಗಳ ಬಗ್ಗೆ ವೆಂಕಟೇಶ ಮಹಾಮಾಯಾ ಮತ್ತು ಇತರ ೧೨ ಗೃಹಸ್ಥರು ಶ್ರೀ ರಮಾನಾಥ ತೀರ್ಥರನ್ನು ಉದ್ದೇಶಿಸಿ ಬರೆದದ್ದು. ಅಂಕೋಲಾ ಮಠದಲ್ಲಿ ಶ್ರೀಶಕೆ ೧೭೨೫ ರುದಿರೋದ್ಘಾರಿ ಸಂವತ್ಸರ ಮಾರ್ಗಶೀರ್ಶ ಶುದ್ಧನವಮಿಯಂದು ಶ್ರೀ ಭೂವಿಜಯರಾಮಚಂದ್ರ ತೀರ್ಥರು ಮೋಕ್ಷಾರೂಢರಾದರು. ಅವರ ವೃಂದಾವನ ಅಂಕೋಲಾ ಮಠದಲ್ಲಿದೆ.