Taking too long? Close loading screen.

Shree Samsthan Gokarn Partagali Jeevottam Math

PL-logo--146x119A

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

31 Nasik Kannada

೩೧ ಶ್ರೀ ಲಕ್ಷ್ಮೀನಾರಾಯಣ ಭವನ ನಾಸಿಕ

ಸಂಸ್ಥಾಪಕರು : ಶ್ರೀ ವಿದ್ಯಾಧಿರಾಜ ತೀರ್ಥ (೨೩)
ಶಿಲಾನ್ಯಾಸ : ಶಕೆ ೧೯೨೨ ವಿಕ್ರಮ ಸಂವತ್ಸರ. ಭಾದ್ರಪದ ಬಹುಳ ದ್ವಿತೀಯ (೧೫-೦೯-೨೦೦೦)
ಉದ್ಘಾಟನೆ : ಶಕೆ ೧೯೨೪ ಚಿತ್ರಭಾನು ಸಂವತ್ಸರ ಫಾಲ್ಗುಣ ಬಹುಳ ಸಪ್ತಮಿ (೦೪-೦೪-೨೦೦೨)
ಶ್ರೀ ಲಕ್ಷ್ಮೀನಾರಾಯಣ ತೀರ್ಥರ (೯) ೩೦೦ನೇ ಪುಣ್ಯತಿಥಿ ಸ್ಮರಣಾರ್ಥ
ಪ್ರತಿಮಾ : ಶ್ರೀ ಲಕ್ಷ್ಮೀ ನಾರಾಯಣ (ಚಂದ್ರಕಾಂತ ಶಿಲೆ)
ವಿಳಾಸ : ಶ್ರೀ ಲಕ್ಷ್ಮೀ ನಾರಾಯಣ ಭವನ, ವಾರ್ಡ ನಂ. ೪೫, ಚೇತನ ನಗರ, ನಾಸಿಕ ೪೨೨೦೦೧
ಒಟ್ಟುಭೂ ಪ್ರದೇಶ : ೨೫೦೦ ಚದರ ಮೀಟರ
ವಾಸ್ತು ನಿರ್ಮಾಣ : ೬೧೦ ಚದರ ಮೀಟರ
ಕಟ್ಟಡದ ವಿವರ : ಗುರುಭವನ, ಸಭಾಭವನ, ಅಡುಗೆ ಮನೆ. ಗಾರ್ಡನ
ಸಭಾಭವನ : ಶ್ರೀ ಲಕ್ಷ್ಮೀನಾರಾಯಣ ಭವನ (ಹವಾ ನಿಯಂತ್ರಿತ)
ಚಾತುರ್ಮಾಸ : ೨೦೦೦ನೇ ಇಸವಿಯಲ್ಲಿ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿಯವರ ೩೪ನೇ ಚಾತುರ್ಮಾಸ

೩೧ ನಾಸಿಕ ಮಠದ ಇತಿಹಾಸ

ಶ್ರೀಮದ್ ಲಕ್ಷ್ಮೀನಾರಾಯಣ ತೀರ್ಥರು ವಾರಣಾಸಿ ಮಠವನ್ನು ಜೀರ್ಣೋದ್ಧಾರ ಮಾಡಿ ಮರಳಿ ಪರ್ತಗಾಳಿ ರಾಮನವಮಿ ಉತ್ಸವಕ್ಕೆ ಬರಲಿದ್ದಾರೆಂದು ತಿಳಿದ ಮಠಾನುಯಾಯಿಗಳಲ್ಲಿ ಅತೀವ ಉತ್ಸಾಹ. ಎಂಟುವರ್ಷಗಳ ಸುದೀರ್ಘ ಕಾಲದವರೆಗೆ ಗುರುಗಳ ದರ್ಶನವಿಲ್ಲದ ಶಿಷ್ಯವೃಂದದವರು ರಾಮನವಮಿ ಉತ್ಸವಕ್ಕೆ ಪರ್ತಗಾಳಿಗೆ ಹೊಗುವ ಬಗ್ಗೆ ನಿರ್ಣಯಿಸಿದ್ದರು. ಆದರೆ ಅವರು ಉಹಿಸದ ಘಟನೆ ಒಂದು ನಡೆದು ಹೋಯಿತು. ಶ್ರೀ ಲಕ್ಷ್ಮಿನಾರಾಯಣ ತೀರ್ಥರು ಪರ್ತಗಾಳಿಗೆ ಮರಳುವ ಮಾರ್ಗದಲ್ಲಿ ನಾಸಿಕದ ಗೋದಾವರಿ ತೀರದಲ್ಲಿ ವೃಂದಾವನಸ್ಥರಾದರು. ಶ್ರೀಶಕೆ ೧೬೨೪ರ ದುಂದುಭಿ ಸಂವತ್ಸರ. ಫಾಲ್ಗುಣ ವದ್ಯ ಸಪ್ತಮಿಯಂದು ನಡೆದ ಈ ಘಟನೆ ಬರಸಿಡಿಲಿನಂತೆರಗಿ ಶಿಷ್ಯವೃಂದ ದಿಗಿಲುಗೊಂಡಿತು.

ಇತ್ತ ಪರ್ತಗಾಳಿಯಲ್ಲಿ ಗುರುಗಳ ಆಗಮನದ ಸುದ್ದಿಯಿಂದ ಸಂತೋಷಗೊಂಡಿದ್ದ ಶಿಷ್ಯ ಶ್ರೀ ಲಕ್ಷ್ಮಿಕಾಂತ ತೀರ್ಥರಿಗೆ ತಮ್ಮ ಗುರುಗಳು ಮಹಾನಿರ್ವಾಣವಾದ ಅಘಾತದ ಸಮಾಚಾರ ಅಧಿರರನ್ನಾಗಿಸಿತು. ಎಂಟು ವರ್ಷದ ಹಿಂದೆ ತಮ್ಮನ್ನು ಶಿಷ್ಯರನ್ನಾಗಿ ಸ್ವೀಕರಿಸಿ ಆತುರದಲ್ಲಿ ವಾರಣಾಸಿಗೆ ತೆರಳಿದ ಗುರುಗಳು ಯಾವಾಗ ಬರುವರೆಂದು ಶಬರಿಯಂತೆ ಕಾಯುತ್ತಿದ್ದರು. ನಂತರ ಧೈರ್ಯಗೆಡದೆ ಮುಂದಿನ ಕಾರ್ಯದ ಬಗ್ಗೆ ಕಾರ್ಯತತ್ಪರರಾದರು. ತಾವು ಗುರುಪೀಠವನ್ನೇರುವ ಪೂರ್ವದಲ್ಲಿ ನಾಸಿಕದಲ್ಲಿ ಗುರುವಿನ ವೃಂದಾವನ ಕಟ್ಟಲು ಸಕಲ ಸಿದ್ದತೆ ಮಾಡುವಬಗ್ಗೆ ಆದೇಶ ನೀಡಿದರು. ವೃಂದಾವನದ ಪೂಜಾ ಕಾರ್ಯಕ್ಕೆ ಬೇಕಾದ ಅವಶ್ಯಕ ವ್ಯವಸ್ಥೆ ಮಾಡಿದರು. ಅದರಂತೆ ಪ್ರತಿದಿನ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದವು. ಶ್ರೀ ಲಕ್ಷ್ಮಿಕಾಂತ ತೀರ್ಥರು (೧೦) ಶಿಷ್ಯರನ್ನು ಪರಿಗ್ರಹಿಸಿ ಎಳುವರ್ಷಗಳ ತಮ್ಮಕಾರ್ಯಭಾರ ಮುಗಿಸಿ ಹೊನ್ನಾವರದ ಶ್ರೀ ರಾಮಮಂದಿರದಲ್ಲಿ ವೃಂದಾವನಸ್ಥರಾದರು. ಕಾಲಕ್ರಮೇಣ ದೂರದ ನಾಸಿಕದ ಸಂಪರ್ಕ ಪರ್ತಗಾಳಿಯಿಂದ ತಪ್ಪಿ ಅಲ್ಲಿಯ ವೃಂದಾವನದ ಬಗ್ಗೆ ಮಾಹಿತಿ ಕೂಡ ತಿಳಿಯದಾಯಿತು. ಈ ಬಗ್ಗೆ ಪರಪಂರೆಯ ೨೨ನೇ ಯತಿವರ್ಯ ಶ್ರೀ ದ್ವಾರಕಾನಾಥ ತೀರ್ಥರು ತಮ್ಮ ಕಾಲಾವಧಿಯಲ್ಲಿ ಅದನ್ನು ಶೋಧಿಸುವ ಪ್ರಯತ್ನ ಮಾಡಿದರು. ಪರ್ತಗಾಳಿಯ ವೃಂದಾವನಗಳಿಗೆ ಕೆಲವು ವೈಶಿಷ್ಠತೆಗಳಿದ್ದು ಅಂತಹ ಒಂದು ವೃಂದಾವನ ನಾಸಿಕನ ಗೋದಾವರಿ ತೀರದಲ್ಲಿ ಸಿಕ್ಕಿತು ಆದರೆ ಒಬ್ಬ ಬೈರಾಗಿ ಅದು ತನ್ನ ಮಾಲಿಕತ್ವದ ಭೂಮಿಎಂದು ವಾದಿಸುತ್ತಿದ್ದ. ಹೀಗೆ ಕಾಲವೂ ಸರಿಯುತ್ತಿತ್ತು.
ಕೆಲವು ಸಂದರ್ಭಗಳಲ್ಲಿ ಶುಭಕಾರ್ಯಗಳು ಘಟಿಸುವದಿದ್ದಲ್ಲಿ ಅದಕ್ಕೆ ದೈವಿ ಪ್ರೇರಣೆ ಸಕಾಲಿಕ ಅವಶ್ಯಕ ಸಹಾಯಗಳು ನಾವು ನೀರಿಕ್ಷಿಸಿದ್ದಕಿಂತ ಪೂರ್ವದಲ್ಲೆ ಕೂಡಿಬರುತ್ತದೆ. ನಾವು ಎಣಿಸದ ಕಾರ್ಯಗಳು ಸುಂದರ ಸುವ್ಯವಸ್ಥಿತ ರೀತಿಯಲ್ಲಿ ನಡೆದುಹೊಗುತ್ತದೆ. ಇದಕ್ಕೆ ಜ್ವಲಂತ ಉದಾಹರಣೆ ನಾಸಿಕ ಶಾಖಾಮಠ. ಶ್ರೀರಾಮನು ತನ್ನ ವನವಾಸದ ಅಧಿಕಾಂಶವನ್ನು ನಾಸಿಕ ಗೋದಾವರಿಯ ತೀರದ ಪಂಚವಟಿಯಲ್ಲಿಯೇ ಕಳೆದಿದ್ದನು. ಪ್ರತಿಯಾತ್ರೆಯಲ್ಲೂ ಅದರಲ್ಲೂ ನಾಸಿಕದ ಗೋದಾವರಿ ತೀರದಕಡೆ ಬಂದಾಗಲೆಲ್ಲಾ ಶ್ರೀವಿದ್ಯಾಧಿರಾಜ ತೀರ್ಥರಿಗೆ ತಮ್ಮ ಪರಂಪರೆಯ ೯ನೇಯತಿವರ್ಯ ಶ್ರೀ ಲಕ್ಷ್ಮೀನಾರಾಯಣ ತೀರ್ಥರ ಸ್ಮರಣೆಯಾಗುತ್ತಿತ್ತು. ತಮ್ಮ ಗುರುಗಳ ವೃಂದಾವನ ಹುಡುಕುವ ಪ್ರಯತ್ನ ಅಲ್ಲದೆ ಅಲ್ಲಿ ಶ್ರೀ ಲಕ್ಷ್ಮೀನಾರಾಯಣ ತೀರ್ಥರ ಸ್ಮರಣಾರ್ಥ ಮಂದಿರ ಕಟ್ಟುವ ತಮ್ಮ ಗುರುಗಳ ಉತ್ಕಟ ಇಚ್ಚೆಯ ಅರಿವಿದ್ದ ಶ್ರೀಗಳು ನಾಸಿಕದಲ್ಲಿ ಭವ್ಯ ಮಂದಿರ ಕಟ್ಟುವ ಬಗ್ಗೆ ಮನದಲ್ಲೆ ನಿಶ್ಚಯಿಸಿದ್ದರು. ಇದಕ್ಕೆ ದೈವಸಹಾಯವೂ ಕೂಡಿ ಬಂದಿತು.
ಶ್ರೀ ಲಕ್ಷ್ಮಿನಾರಾಯಣ ತೀರ್ಥರು ವೃಂದಾವನಸ್ಥರಾದ ೩೦೦ನೇ ವರ್ಷಕ್ಕೆ ಶ್ರೀ ಶಕೆ ೧೯೨೨ರ ಚಾತುರ್ಮಾಸ ನಾಸಿಕದಲ್ಲೆ ಮಾಡುವ ಶ್ರೀಗಳವರ ನಿರ್ಧಾರಕೂಡ ದೈವಿ ಪ್ರೇರಣೆಯೆಂದೇ ಹೇಳಬೇಕು. ಪೂರ್ವಸಿದ್ದತೆಯಿಲ್ಲದೆ ಕೇವಲ ನಾಸಿಕದಲ್ಲಿ ಚಾತುರ್ಮಾಸ ಮಾಡುವ ಬಗ್ಗೆ ಮಠಾನುಯಾಯಿಗಳಿಗೆ ತಿಳಿಸಿ ಶ್ರೀಗಳವರು ನಾಸಿಕಕ್ಕೆ ಆಗಮಿಸಿದರು. ಗೋಕರ್ಣ ಮಠದ ಒಡೆತನದಲ್ಲಿರುವ ಒಂದು ನಿವೇಶನ ನಾಸಿಕದಲ್ಲಿರುವ ಬಗ್ಗೆ ಮಠದ ಕಡತಗಳಲ್ಲಿ ಮಾಹಿತಿ ಸಿಕ್ಕಿತ್ತು. ಆ ಸ್ಥಳವನ್ನು ಶೋಧಿಸಿ ಹೊರಟಾಗ ಆ ಸ್ಥಳವನ್ನು ಸರಕಾರಿ ಹೆದ್ದಾರಿಯ ಒಂದು ಸೇತುವೆ ನಿರ್ಮಿಸಲು ಉಪಯೋಗಿಸಿದ್ದು ಅದರ ಪರಿಹಾರಧನವನ್ನು ಅಂದು ಪೀಠದ ಮೇಲಿದ್ದ ಶ್ರೀಗಳವರಿಗೆ ನೀಡುವ ಕುರಿತು ತಿಳಿಸಲಾಗಿ ಅವರು ಹಣವನ್ನು ನಿರಾಕರಿಸಿ ಅದರ ಬದಲಾಗಿ ಬೇರೆಕಡೆ ನಿವೇಶನ ನೀಡುವಂತೆ ನೀಡಿದ ಅರ್ಜಿಯ ದಾಖಲೆ ಸರಕಾರಿ ಕಛೇರಿಯಲ್ಲಿ ದೊರಕಿತು. ಇದರಿಂದ ಹೊಸ ನಿವೇಶನ ಪಡೆಯಲು ತುಂಬಾ ಸಹಾಯಕವಾಯಿತು. ಈ ಬಗ್ಗೆ ಕಾರ್ಯತತ್ಪರರಾದ ಶ್ರೀಗಳು ಮಠಾನುಯಾಯಿಗಳ ಸಹಕಾರದಿಂದ ನಾಸಿಕದ ಮುಂಬೈ ರಾಷ್ಟ್ರೀಯ ಹೆದ್ದಾರಿಯ ಸನಿಹದ ಚೇತನ ನಗರದಲ್ಲಿ ಒಂದು ನಿವೇಶನ ಪಡೆಯುವಲ್ಲಿ ಸಫಲರಾದರು. ವೃತಾಚರಣೆ ಸಂಪನ್ನಗೊಂಡ ನಂತರ ಪರ್ತಗಾಳಿಗೆ ಮರಳುವ ಪೂರ್ವದಲ್ಲಿ ೨೦೦೦ನೇ ಇಸವಿ ಸೆಪ್ಟೆಂಬರ ೧೫ ರಂದು ಶಾಖಾಮಠದ ಶಿಲಾನ್ಯಾಸವನ್ನು ನೆರವೇರಿಸಿದರು. ಮುಂದೆ ಒಂದೂವರೆ ವರ್ಷಗಳನಂತರ ಶ್ರೀ ಲಕ್ಷ್ಮಿನಾರಾಯಣ ಭವನದ ಉದ್ಘಾಟನೆ ೨೦೦೨ನೇ ಇಸವಿ ಎಪ್ರಿಲ ನಾಲ್ಕರಂದು ವೈಭವಯುತವಾಗಿ ನೆರವೇರಿಸಿದರು. ಈ ವಾಸ್ತುವಿನಲ್ಲಿ ಶ್ರೀ ಲಕ್ಷ್ಮೀನಾರಾಯಣ ತೀರ್ಥರ ಸ್ಮರಣಾರ್ಥ ವೃಂದಾವನದ ಪ್ರತಿಕ್ರತಿ ನಿರ್ಮಿಸಿ ಚಂದ್ರಕಾಂತ ಶಿಲೆಯ ಶ್ರೀ ಲಕ್ಷ್ಮಿನಾರಾಯಣ ದೇವರ ಸುಂದರ ಪ್ರತಿಮೆಯನ್ನು ಪ್ರತಿಷ್ಠಾಪಿಸಿಲಾಗಿದೆ.