Taking too long? Close loading screen.

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

Kushavati Kannada

ಕುಶಾವತಿ

ಪುರಾ ವಿಧಾತ್ರಾ ರಘುನಾಥಸೇವಾಂ ಕರಿಷ್ಯಮಾಣೇನ ಕುಶಾಂಬುಬಿಂದುನಾ |
ವಿನಿರ್ಮಿತಾ ಸಾತ್ರ ಸರಿತ್ವಾರಾ ವನೇ ಕುಶಾವತೀಂ ತಾಂ ಪ್ರವದಂತಿ ಸೂರಯಃ :
(ತೃತೀಯ ಸ್ಥಬಕ, ಶ್ರೀ ಗುರುಪರಂಪರಾಮೃತ)

ಭವಿಷ್ಯಕಾಲದಲ್ಲಿ ಶ್ರೀರಾಮದೇವರ ಸೇವೆಯು ತನ್ನಿಂದ ಆಗಬೇಕೆಂಬ ಇಚ್ಛೆಯಿಂದ ಸೃಷ್ಠಿಕರ್ತ ಬ್ರಹ್ಮದೇವನು ಪೂರ್ವದಲ್ಲೇ ತನ್ನ ಕಮಂಡಲುವಿನ ಕುಶೋದಕದ ಬಿಂದುವಿನಿಂದ ಈ ನದಿಯನ್ನು ಸೃಷ್ಟಿಸಿದನು. ಆದ್ದರಿಂದಲೆ ವಿದ್ವತ್‌ಜನರು ಈ ನದಿಯನ್ನು ಕುಶಾವತಿ ಎಂದು ಸಂಭೋದಿಸುತ್ತಾರೆ.

ಮೇಲಿನದು ವಾಸ್ತವಿಕವಾಗಿ ಈ ಹಿಂದೆ ನಡೆದಿದೆಯೆ? ಹೌದು ಶ್ರೀ ಶಕೆ ೧೯೩೧ ವಿರೊಧಿ ಸಂವತ್ಸರ ಆಶ್ವೀಜ ಶುಕ್ಲ ತ್ರಯೋದಶಿ ಶುಕ್ರವಾರ (೦೨/೧೦/೨೦೦೯). ಬ್ರಹ್ಮನ ಸೃಷ್ಟಿಯ ಈ ಪುಣ್ಯತಮ ನದಿ ತನ್ನ ಹುಟ್ಟಿನ ಉದ್ದೇಶವನ್ನು ಸಾರ್ಥಕ ಪಡಿಸಿಕೊಂಡ ದಿನ. ಅಂದು ಪರ್ತಗಾಳಿಯ ಇತಿಹಾಸದಲ್ಲೆ ಒಂದು ಅಪೂರ್ವ ಸ್ಮರಣಿಯ ದಿನವೆಂದೇ ಉಲ್ಲೇಖಿಸಬೇಕು.

ಬೆಳಿಗ್ಗಿನಿಂದ ಧಾರಾಕಾರ ಮಳೆ ಆರಂಭವಾಗಿ ಮಧ್ಯಾಹ್ನ ಒಂದೂವರೆ ಘಂಟೆಗೆ ಮಳೆಯ ರಭಸ ಇನ್ನೂ ಏರತೊಡಗಿತು. ಕುಶಾವತಿಯು ಶ್ರೀ ರಾಮದೇವರ ಪಾದಸೇವೆಗೆ ಆತುರಳಾಗಿದ್ದಳು. ಪ್ರತಿ ನಿಮಿಷಕ್ಕೂ ನದಿಯ ನೀರಿನ ಮಟ್ಟ ಏರುತ್ತಲೇ ಇತ್ತು. ಬ್ರಹ್ಮದೇವರ ಆಜ್ಞೆಯನ್ನು ಶಿರಸಾವಹಿಸಿ ಶ್ರೀರಾಮದೇವರ ಪಾದಪ್ರಕ್ಷಾಳನ ಮಾಡಲು ಮೆಲ್ಲ ಮೆಲ್ಲನೆ ಶ್ರೀ ರಾಮದೇವರ ಸನ್ನಿಧಾನಕ್ಕೆ ಬರುತ್ತಿದ್ದಳು. ಅಂದೆ ಸಾಯಂಕಾಲದೊಳಗೆ ತನ್ನ ಕಾರ್ಯವನ್ನು ಸಂಪನ್ನಗೊಳಿಸಲೋಸುಗ ಪ್ರವಾಹದ ಮಟ್ಟವನ್ನು ವೇಗವಾಗಿ ಏರಿಸತೊಡಗಿದಳು. ಕ್ರಮೇಣ ಕುಶಾವತಿಯು ಮಠದ ಹಿಂಭಾಗದ ರಾಜಾಂಗಣದಲ್ಲಿ ತಲುಪಿ ತಾನು ಮಠದ ಒಳಗೆ ಬರುತ್ತಿರುವ ಸಮಾಚಾರವನ್ನು ಮಠದಲ್ಲಿರುವವರಿಗೆ ಸೂಚಿಸಿದಳು. ನಂತರ ಏರಿದ ನೀರು ಅರ್ಧ ಘಂಟೆಯಲ್ಲೆ ಹೆಚ್ಚುತ್ತ ಶ್ರೀ ರಾಮದೇವರ ಗರ್ಭಗುಡಿಯನ್ನು ಪ್ರವೇಶಿಸಿ ಶ್ರೀ ರಾಮದೇವರ ಪಾದಪ್ರಕ್ಷಾಳನ ಮಾಡಿ ಧನ್ಯಳಾಗಿ, ತನ್ನ ಕರ್ತವ್ಯವನ್ನು ಪೂರೈಸಿ ಬಂದ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಕುಶಾವತಿ ನದಿಯ ಪ್ರವಾಹದಲ್ಲಿ ಸೇರಿಕೊಂಡಳು. ಅಂದು ನದಿಯ ನೀರಿನ ಮಟ್ಟ ಎಂದಿಗಿಂತ ಸುಮಾರ ೩೨ ಅಡಿಗಳಷ್ಟು ಎರಿತ್ತು.
ಈ ಅಪೂರ್ವ ಘಟನೆ ಮಠದ ಸ್ಥಾಪನೆಯಾದ ಕ್ರಿ.ಶ. ೧೬೫೬ರ ನಂತರ ಎಷ್ಟುಸಲ ಜರುಗಿದೆಯೊ ತಿಳಿಯದು. ಆದರೆ ಅಂದು ಶ್ರೀ ವಿದ್ಯಾಧಿರಾಜ ತೀರ್ಥರು ಪ್ರಥಮಬಾರಿ ಈ ಘಟನೆಗೆ ಸಾಕ್ಷೀಭೂತರಾದರು. ಈ ಮೇಲೆ ಬರೆದ ಗುರುಪರಂಪರಾಮೃತ ಕಾವ್ಯ ಕೇವಲ ಕಾಲ್ಪನಿಕ ಕಥೆಯಲ್ಲ ಸೃಷ್ಟಿಕರ್ತನ ಸೃಷ್ಟಿಯ ಉದ್ದೇಶದ ಸಾರ್ಥಕತೆಯ ಯಶೋಗಾಥೆ.
ಹೀಗೊಂದು ಅಮೋಘ ಘಟನೆ ನಡೆಯುವದಿದ್ದಲ್ಲಿ ಆ ಸ್ಥಳದಲ್ಲಿ ಏನಾದರು ವಿಶಿಷ್ಟ ಮಹತ್ವ ವಿರಲೇ ಬೇಕು. ಅದೇ ಕುಶಾವತಿ ನದಿಯ ಮಠದ ಬಳಿಯ ಸಮುದ್ರಗಾಮಿನೀ ಈಶಾನ್ಯಪ್ಲವಾ ಭಾಗ. ಆದ್ದರಿಂದಲೇ ವಿಶ್ವಕರ್ಮ ನಿರ್ಮಿತ ಶ್ರೀರಾಮಚಂದ್ರನು ಸೀತಾದೇವಿ, ಲಕ್ಷ್ಮಣ ಮತ್ತು ಹನುಮಂತನ ಸಹಿತವಾಗಿ ಗೋಕರ್ಣದ ಭೂಗರ್ಭದಿಂದ ಹೊರಬಂದು ಶ್ರೀ ರಾಮಚಂದ್ರ ತೀರ್ಥ ಸ್ವಾಮಿಯವರಿಗೆ ಕಾಮಧೇನುವಿನ ಮೂಲಕ ಸ್ಥಳ ನಿರ್ದೇಶನ ಮಾಡಿಸುತ್ತಾ ಶಾಸ್ತ್ರದಲ್ಲಿ ಉಲ್ಲೇಖಿಸಲ್ಪಟ್ಟ ’ಗೋವಿಥಿ’ ಎಂದು ಕರೆಯಲ್ಪಡುವ ಕುಶಾವತಿಯ ಈ ಪವಿತ್ರ ಸ್ಥಳದಲ್ಲಿ ನೆಲೆನಿಂತನು. ಏನು ಈ ಗೋವಿಥಿ, ದೇವಭೂಮಿ, ಏನಿದರ ವಾಸ್ತು ಶಾಸ್ತ್ರದ ಮಹತ್ವ?
ದೇವಾಲಯದಂತಹ ಪವಿತ್ರ ವಾಸ್ತುವನ್ನು ಕಟ್ಟಬೇಕಾದರೆ ಅದಕ್ಕೆ ಕೆಲವೊಂದು ವಾಸ್ತು ನಿಯಮಗಳನ್ನು ಶಾಸ್ತ್ರಗಳಲ್ಲಿ ನೀಡಿದ್ದಾರೆ. ಅಂತಹ ಭೂಮಿಯು ದೇವ ಪ್ರತಿಷ್ಠೆಗೆ ದೈವೀಅಂಶದ ಇರುವಿಕೆಯನ್ನು ಸೂಚಿಸುತ್ತವೆ.

ಉತ್ತರಕ್ಕೆ ತಗ್ಗಾಗಿರುವ ಭೂಮಿಯು ಅಂದರೆ ಮಳೆನೀರು ಬಿದ್ದು ಸಹಜವಾಗಿ ಉತ್ತರಕ್ಕೆ ಹರಿದುಹೋಗವಂತೆ ಇರುವ ಭೂಮಿಯು ಧನಧಾನ್ಯಾದಿ ಸಂಪತ್ತನ್ನು ಕೊಡುತ್ತದೆ. ಪೂರ್ವಕ್ಕೆ ತಗ್ಗಿರುವ ಭೂಮಿಯು ಪುತ್ರಪೌತ್ರಾದಿ ಸಮೃದ್ಧಿಯನ್ನು ನೀಡುತ್ತದೆ. ಕುಶಾವತಿ ನದಿಯು ಪೂರ್ವದಿಂದ ಪಶ್ಚಿಮಾಭಿಮುಖವಾಗಿ ಹರಿಯುತ್ತಾ ಪರ್ತಗಾಳಿ ಮಠದ ಬಳಿಯೆ ಉತ್ತರಕ್ಕೆ ತಿರುಗಿ ಮುಂದೆ ಅಲ್ಲಿಂದ ಈಶಾನ್ಯಾಭಿಮುಖವಾಗಿ ಮುಂದುವರೆಯುತ್ತಾಳೆ. ಆಗಮ ಶಾಸ್ತ್ರದಲ್ಲಿ ಈಶಾನ್ಯಪ್ಲವಾ ಎಂದು ಹೇಳಲ್ಪಡುವ ಈ ನಿವೇಶನವು ದೇವಭೂಮಿ, ಗೋವೀಥಿ ಎಂದು ವರ್ಣಿತವಾಗಿದೆ. (ಮುಹೂರ್ತಮಾಧವಿ ಅಧ್ಯಾಯ ೯-೪) ಅದರಲ್ಲಿಯೂ ಮುಂದೆ ಸಮುದ್ರವನ್ನು ಸೇರುವ (ಸಮುದ್ರಗಾಮಿನಿ) ನದಿಯು ಇನ್ನೂ ಹೆಚ್ಚಿನ ಶ್ರೇಷ್ಠತೆಯನ್ನು ಹೊಂದಿದೆ. ಹೀಗೆ ಸರ್ವ ದೃಷ್ಟಿಯಿಂದ ಈ ಸ್ಥಳವು ಅತಿ ಮಹತ್ವಪೂರ್ಣವಾಗಿದೆ.

ಪ್ರಾಕ್ ಉದಕ್ಪ್ರವಣ ಸ್ಥಲ ಅಂದರೆ ಉತ್ತರಕ್ಕೆ ತಾಗಿಕೊಂಡಿರುವ ಪೂರ್ವ ದಿಕ್ಕಿನ ಪ್ರದೇಶ

ಅತ್ಯಂತ ವೃದ್ಧಿದಂ ನೃಣಾಮೀಶಾನಪ್ರಾಗುದಕಪ್ಲವಂ
ಅನ್ಯದಿಕ್ಷು ಪ್ಲವಂ ತೇಷಾಂ ಶಾಶ್ವತ್ ಅತ್ಯಂತ ದುಃಖದಮ್ (ಛಲಾರಿಯೇ)

‘ಉದಗಾದಿ ಪ್ಲವಾ ಭೂಮಿಃ’, ವಾಯುವ್ಯ, ಉತ್ತರ, ಈಶಾನ್ಯ ಹೀಗೆ ಈ ಮೂರು ದಿಕ್ಕುಗಳ ನಿವಾಸಿಗಳಿಗೆ ಸರ್ವಸಂಪದಾದಿ ಫಲವನ್ನು ಉಂಟುಮಾಡುತ್ತದೆ. ಈ ಮೇಲಿನ ಶಾಸ್ತ್ರೋಕ್ತಿಗಳನ್ನು ಇಂದಿಗೂ ಶಾಸ್ತ್ರದಲ್ಲಿ ಉಕ್ತವಾಗಿರುವ ಫಲವನ್ನು ನೀಡುವವು ಎಂಬುದಕ್ಕೆ ಪರ್ತಗಾಳಿ ಮಠವು ಜ್ವಲಂತ ಉಧಾಹರಣೆಯಾಗಿ ನೆಲೆನಿಂತು ಅದರ ಫಲವನ್ನು ಪಡೆಯುತ್ತಿದೆ.
ಕ್ರಿ.ಶ. ೧೬೫೬ರಲ್ಲಿ ಶ್ರೀ ರಾಮಚಂದ್ರ ತೀರ್ಥರು ದೈವೀ ಸಂಕಲ್ಪದಂತೆ ಶ್ರೀರಾಮನ ವಿಗ್ರಹದೊಂದಿಗೆ ಈ ಸ್ಥಳಕ್ಕೆ ಬಂದಾಗ ಇದೊಂದು ಪರ್ವತ ಕಾನನದ ಮಧ್ಯದ ನಿರ್ವಸಿತ, ನಿರ್ಜನ ಕಾಡಿನ ನದಿಯ ದಡ. ಅಲ್ಲಲ್ಲಿ ಬಿದ್ದ ಗೋಮಯದಿಂದಾಗಿ ಇಲ್ಲಿ ಗೋವೃಂದ ನೀರು ಕುಡಿಯಲು ಬರುತ್ತವೆ ಎಂಬುದಕ್ಕೆ ನಿದರ್ಶನವಾಗಿತ್ತು. ಮುಂದೆ ಶ್ರೀ ರಾಮಚಂದ್ರ ತೀರ್ಥರು ಶ್ರೀ ರಾಮಚಂದ್ರನ ವಿಗ್ರಹ ಪ್ರತಿಷ್ಟಾಪಿಸಿ ಮಠವನ್ನು ಕಟ್ಟಿ ಇಲ್ಲಿಯೇ ವಾಸ್ತವ್ಯ ಮಾಡಿದರು. ವನವಾಸಕಾಲದಲ್ಲಿ ಶ್ರೀರಾಮನು ಗೋದಾವರಿ ನದೀ ತೀರದಲ್ಲಿ ಸೀತೆ ಮತ್ತು ಲಕ್ಷ್ಮಣರೊಂದಿಗೆ ವಾಸಿಸುತ್ತಿದ್ದಂತೆ ತೋರುತ್ತಿದ್ದ ಅಂದಿನ ಪುರಾಣಕಾಲದ ಪಂಚವಟಿಯೇ ಎಂಬಂತೆ ಭಾಸವಾಗುತ್ತದೆ. ರಾಮಾಯಣಕಾಲದಲ್ಲಿ ಹನುಮಂತ ಆನಂತರ ಸೇರಿದವನ್ನಾದ್ದರಿಂದ ಹನುಮಂತನು ಋಷಿವನಕ್ಕೆ ತೆರಳಿ ಅಲ್ಲಿ ನೆಲೆಸಿ ಅಲ್ಲಿಯೂ ಕ್ರಿ.ಶ ೧೬೫೬ರಲ್ಲಿ ಶಾಖಾಮಠವಾಯಿತು. ಆನಂತರದಿಂದ ಅಭಿವೃದ್ಧಿಯ ಸೋಪಾನಗಳು ಪ್ರಾರಂಭವಾದವು. ದೂರದ ಮಂಗಳೂರಿನಲ್ಲಿ ಕ್ರಿ.ಶ. ೧೬೬೦ರಲ್ಲಿ ಶಾಖಾಮಠ ಸ್ಥಾಪನೆಯಾಯಿತು. ಪರ್ತಗಾಳಿಯಲ್ಲಿ ದೇವ-ಗುರುಗಳ ಹೊರತಾಗಿ ಇತರ ಜನವಸತಿ ಇರಲಿಲ್ಲ. ನಂತರದ ದಿನಗಳಲ್ಲಿ ಇದೇ ಮಠದಲ್ಲಿ ಪ್ರಥಮ ಶಿಷ್ಯ ಸ್ವೀಕಾರದ ಸಮಾರಂಭದ ಕಾರ್ಯಕ್ರಮ ಜರುಗಿತು. ಶ್ರೀ ರಘುಚಂದ್ರ ತೀರ್ಥರು ಸಂನ್ಯಾಸ ದೀಕ್ಷೆ ಪಡೆದು ಮುಂದೆ ಅಂಕೋಲೆಯಲ್ಲಿ ಶಾಖಾಮಠವಾಯಿತು. ಶ್ರೀ ರಘುಚಂದ್ರ ತೀರ್ಥರು ಗುರುಪೀಠವನ್ನಾಳತೊಡಗಿದಾಗ ಪರ್ತಗಾಳಿಯಲ್ಲಿ ಪಂಚದಿನಾತ್ಮಕ ರಥೋತ್ಸವವೂ ಪ್ರಾರಂಭವಾಯಿತು. ರಥೋತ್ಸವವನ್ನು ಹಾಳುಮಾಡಲು ಬಂದ ನಾರಾಯಣ ಭೂತನು ಇಲ್ಲಿಯೇ ರಥಬೀದಿಯಲ್ಲಿ ಮಾರುತಿಯ ಪಾದದಬಳಿ ಬಂಧಿತನಾದನು. ನಾಲ್ಕು ಶಾಖೆಯಿಂದ ಪ್ರಾರಂಭವಾಗಿ ಮೂವತ್ಮೂರು ಶಾಖೆಯಾಗಿ ಭಾರತದ ಉದ್ದಗಲಕ್ಕೂ ಮಠದ ಶಾಖೆಗಳು ವಿಸ್ಥಾರಗೊಂಡವು. ಮಠಾನುಯಾಯಿಗಳ ಜೀವನದಲ್ಲೂ ಅಭಿವೃದ್ಧಿಯಾಗಿ ಅವರ ವಾಸ್ತವ್ಯದ ಸ್ಥಳದಲ್ಲಿ ನೂತನ ದೇವಾಲಯಗಳು ಉದಯವಾಗಿ ಸುಮಾರು ೨೫೦ಕ್ಕೂ ಹೆಚ್ಚು ದೇವಾಲಯಗಳು ಮಠದ ಧಾರ್ಮಿಕ ಆಡಳಿತಕ್ಕೆ ಒಳಪಟ್ಟವು.
ಹೀಗೆ ದಿನದಿಂದ ದಿನಕ್ಕೆ ಅಭಿವೃದ್ಧಿಯ ಪಥದಲ್ಲಿ ಮುಂದುವರೆದ ಯಶೋಗಾಥೆಯ ಪುಟಗಳಲ್ಲಿ ಕ್ರಿ.ಶ. ೧೯೧೫ನೇ ಮನ್ಮಥ ಸಂವತ್ಸರ ಮಠದ ಇತಿಹಾಸದಲ್ಲಿ ಸುವರ್ಣಾಕ್ಷರದಿಂದ ಬರೆದಿಡುವಂತೆ ಶ್ರೀರಾಮದೇವರಿಗೆ ಸ್ವರ್ಣಮಂಟಪದ ಸಮರ್ಪಣೆಯೂ ನಡೆಯಿತು. ಹೀಗೆ ದೇವಮಂದಿರದ ವಾಸ್ತು ಮಠದ ಅಭಿವೃದ್ಧಿಯಲ್ಲಿ ಪ್ರಮುಖಪಾತ್ರ ವಹಿಸುತ್ತದೆ ಎಂಬುದಕ್ಕೆ ಪರ್ತಗಾಳಿ ಮಠ ನಿದರ್ಶನವಾಗಿದೆ ಮುಂದೆಯೂ ಇನ್ನು ಹೆಚ್ಚಿನ ಅಭಿವೃದ್ಧಿಯನ್ನು ಕಾಣಲಿದೆ. ಪ್ರಸ್ತುತ ಮಠಗಳಲ್ಲಿ ಇಂತಹ ನೈಸರ್ಗಿಕ ವಾಸ್ತು ಇನ್ನಾವದೇ ಮಠಗಳಿಗಿಂತ ನಮಗೆ ಶ್ರೀರಾಮದೇವರು ದಯಪಾಲಿಸಿದ ಈ ವಾಸ್ತುವು ದೈವಾನುಗೃಹದ ಆಶೀರ್ವಾದವೆಂದು ಹೇಳಿದರೆ ಅತಿಶಯೋಕ್ತಿಯಾಗಲಾರದು.

“ಶ್ರೀ ರಾಮಚಂದ್ರಾರ್ಪಣಮಸ್ತು”