Taking too long? Close loading screen.

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

13 Shrikanth Kannada

ಶ್ರೀಮದ್ ಶ್ರೀಕಾಂತ ತೀರ್ಥ

ಜನ್ಮ ಸ್ಥಳ : ಪೈಂಗಿಣಿ ಗ್ರಾಮದ ಮಹಲ್ವಾಡ
ದೀಕ್ಷಾ ಸ್ಥಳ : ಪರ್ತಗಾಳಿ ಮಠ
ದೀಕ್ಷಾಗುರು : ಶ್ರೀ ಕಮಲಾಕಾಂತ ತೀರ್ಥ (೧೨)
ಶಿಷ್ಯಸ್ವೀಕಾರ : ಶ್ರೀ ಭೂವಿಜಯರಾಮಚಂದ್ರ ತೀರ್ಥರು (೧೪)
ಮಹಾನಿರ್ವಾಣ : ಶ್ರೀಶಕೆ ೧೭೦೮ ಪರಾಭವ ಸಂವತ್ಸರ ಆಷಾಢ ಶುಕ್ಲ-೯ ಮಂಗಳವಾರ (೦೪-೦೭-೧೭೮೬)
ವೃಂದಾವನ ಸ್ಥಳ : ಪರ್ತಗಾಳಿ ಮಠ
ಗುರುಪೀಠ ಕಾಲಾವಧಿ : ೨೮ ವರ್ಷ ೦೫ ತಿಂಗಳು ೧೮ ದಿನಗಳು

ಸ್ವಾಮೀಜಿಯ ಇತಿಹಾಸ

ಶ್ರೀಕಾಂತಚರಣಾಮ್ಭೋಜಭೃಂಙ್ಗ ನಿಃಙ್ಗಮಾನಸಮ್ ।
ಶ್ರಯೇ ಶ್ರೀಕಾಂತಯೋಗಿಶಂ ವಿಷಯಾಸಂಙ್ಗಸಿಧ್ಯಯೇ॥
ಶ್ರೀಮದ್ ಶ್ರೀಕಾಂತ ತೀರ್ಥರು ಶ್ರೀಮದ್ ಕಮಲಾಕಾಂತ ತೀರ್ಥರ ಶಿಷ್ಯರು. ಅವರು ಕಾಣಕೊಣ ತಾಲೂಕಿನ ಪೈಂಗಿಣಿ ಗ್ರಾಮದ ಮಹಲ್ವಾಡಾದ ಭಟ್ಟಭೂತೆ ಮನೆತನದಲ್ಲಿ ಜನಿಸಿದರು. ಗುರುಗಳು ಅವರಿಗೆ ಪರ್ತಗಾಳಿಮಠದಲ್ಲಿ ಆಶ್ರಮದೀಕ್ಷೆಯನ್ನು ನೀಡಿದರು. ೧೬೮೭ ರಿಂದ ೧೬೯೮ ರವರೆಗಿನ ಅವರ ದಾಖಲೆಗಳು ಮಠದ ಕಡತಗಳಲ್ಲಿ ಲಭ್ಯವಿದೆ. ಶಕೆ ೧೬೮೭ ಆಷಾಢ ಶುದ್ಧ ೧೫ ರಂದು ಶ್ರೀಕಾಂತ ತೀರ್ಥರು ಬರೆದ ರಾಯಸಪತ್ರ ಲಭ್ಯವಿದೆ. ಈ ರಾಯಸಪತ್ರದ ಮೇರೆಗೆ ಗೋಕರ್ಣದ ಮಠವನ್ನು ಸ್ವಾಮೀಜಿಯವರು ಜೀರ್ಣೋದ್ಧಾರ ಮಾಡಲು ಬಯಸಿದ್ದರು. “ಶ್ರೀಮಠ (ಗೋಕರ್ಣದಲ್ಲಿ) ಬಹಳ ಶಿಥಿಲವಾಗಿದೆ. ಜೀರ್ಣೊದ್ಧಾರಮಾಡಬೇಕು. ದ್ರವ್ಯಾನುಕೂಲವಿಲ್ಲದೆ ಕಾರ್ಯ ಸಾಗುವದಿಲ್ಲ. ಈ ಉದ್ದೇಶಕ್ಕಾಗಿ ನಿಮಗೆ ಈ ರಾಯಸ ಪತ್ರ ಬರೆದಿದ್ದೇವೆ. ನೀವು ಶಕ್ತಿಮೀರಿ ದ್ರವ್ಯಾನುಕೂಲ ಮಾಡಿ ಕಳುಹಿಸಿಕೊಡುವದು. ಈ ಸಾರಾಂಶವಿರುವ ರಾಯಸಪತ್ರವನ್ನು ಸರ್ವ ಭಕ್ತ ಮಂಡಳಿಗೆ ಬರೆದು ಕಳುಹಿಸಿದರು. ಶಕೆ ೧೬೯೨ ರಲ್ಲಿ ಶ್ರೀಕಾಂತ ತೀರ್ಥ ಸ್ವಾಮಿಜೀಯವರು ಅನಾರೋಗ್ಯಕ್ಕೆ ಒಳಗಾದರು. ಎಲ್ಲ ಶಿಷ್ಯವರ್ಗ ಸಾಸಷ್ಟ, ಅಂತ್ರೂಜ, ಕೊಂಕಣ ದೇಶಿವಿದ್ವೈದಿಕ ಬ್ರಾಹ್ಮಣ ಸಮಸ್ತ ಗೋಮಂತ ಮಹಾಜನ ಮತ್ತು ಕೆಲವು ಜನರು ಶಕೆ ೧೬೯೨ ಕಾರ್ತಿಕ ಕೃ.-೨ ರಂದು ವಿನಂತಿ ಪತ್ರ ಬರೆದು ಸ್ವಾಮಿಜೀಯವರ ಆರೋಗ್ಯ ವಿಚಾರಿಸಿದ್ದಾರೆ. ಗುರುವರ್ಯರಿಗೆ ಸಾಂತ್ವನ ಹೇಳಿ ದೇವರ ಅಭಯಪ್ರಸಾದ ಪಡೆದು ಸ್ವಾಮಿಯ ತಪೋಬಲ ಆರೋಗ್ಯದಲ್ಲಿ ಯಾವುದೇ ಸಂಶಯವಿಲ್ಲ ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ. ಈ ವೇಳೆಗೆ ಶ್ರೀಸ್ವಾಮಿಜೀಯವರಿಗೆ ಜ್ವರ ಕಾಣಿಸಿಕೊಂಡಿದತ್ತು. ಆದರೆ ಆ ಸಮಯದಲ್ಲಿ ಶಿಷ್ಯರನ್ನು ಸ್ವೀಕರಿಸಿರಲಿಲ್ಲ, ಆದ್ದರಿಂದ ಯಾವುದೇ ಪರಿಸ್ಥಿತಿಯಲ್ಲಿಯೂ ಸ್ವಾಮಿಜೀಯವರು ದೇವರ ಪೂಜೆಯನ್ನು ಸ್ವತಃ ಮಾಡಲೇಬೇಕಾಗಿತ್ತು. ಸ್ನಾನ ತ್ರಿಕಾಲಪೂಜೆಯ ಒಂದು ಭಾಗವಾಗಿದೆ. ಸ್ವಾಮಿಜಿಯವರು ಆ ಕಾಲದಲ್ಲಿ ದಂಡದಲ್ಲಿ ತಮ್ಮ ಜ್ವರವನ್ನು ಆರೋಪಿಸಿ ದೇವರ ಪೂಜೆ ಮಾಡುತ್ತಿದ್ದರು. ಆಗ ದಂಡವು ನಡುಗುತ್ತಿತ್ತು, ದೇವಪೂಜೆಯ ನಂತರ ಗುರುಗಳು ದಂಡದಿಂದ ಜ್ವರವನ್ನು ತಾವು ಸ್ವೀಕರಿಸುತ್ತಿದ್ದರು. ಇಂದಿಗೂ ಈ ಪರಿಸರದ ಜನರಿಗೆ ಜ್ವರ ಕಡಿಮೆಯಾಗದಿದ್ದರೆ ಶ್ರೀಗಳವರ ವೃಂದಾವನಕ್ಕೆ ಹೇಳಿಕೆ ಮಾಡುತ್ತಾರೆ. ಗೋಕರ್ಣದಲ್ಲಿಯ ಮಠವು ಈ ಆಚಾರ್ಯರಿಂದ ಸ್ವಲ್ಪಮಟ್ಟದ ಜೀರ್ಣೋದ್ಧಾರಗೊಂಡಂತೆ ತೋರುತ್ತದೆ. ನಂತರ ಈಗಿನ ಗೋಕರ್ಣ ಮಠವನ್ನು ಕೇವಲ ೪೪ ವರ್ಷಗಳ ನಂತರ ಹದಿನಾರನೇ ಗುರುವರ್ಯ ಶ್ರೀಲಕ್ಷ್ಮೀನಾಥ ತೀರ್ಥರು ಜೀರ್ಣೋದ್ಧಾರ ಮಾಡಿದ್ದಾರೆ ಎಂಬುದಕ್ಕೆ ಶಾಸನದ ಆಧಾರಗಳಿವೆ. ಶ್ರೀ ಶ್ರೀಕಾಂತ ತೀರ್ಥರು ತಮ್ಮ ಅನಾರೋಗ್ಯದಿಂದ ಚೇತರಿಸಿಕೊಂಡ ನಂತರ ತಕ್ಷಣವೇ ಮುಂಬೈಗೆ ತೆರಳಿದರು. ಈ ಬಗ್ಗೆ ಹುಕುಂ ಪತ್ರವೊಂದರಲ್ಲಿ “ವೇದಮೂರ್ತಿ ರಾಜಶ್ರೀ ಶ್ರೀಕಾಂತತೀರ್ಥ ಶ್ರೀಪಾದರು ಗೋವಾದ ಬಂದರಿನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದು ಅವರ ಪ್ರಯಾಣದಲ್ಲಿ ಯಾರೂ ಅವರನ್ನು ಅವಿರೋಧಿಸಬಾರದು ಎಂದು ಪ್ರತಿ ಅಂತರದಲ್ಲಿರುವ ಚೌಕಿದಾರರಿಗೆ ನೀಡಿದ ರಹದಾರಿ ಹುಕುಂ ಪತ್ರಕ್ಕೆ ಮಾಧವರಾವ್ ಬಲ್ಲಾಳ್ ಪ್ರಧಾನರು ಅವರು ಸಹಿ ಹಾಕಿದ್ದಾರೆ. ಇದು ಡಿಸೆಂಬರ್ ೧೩, ೧೭೭೦ ರ ಆದೇಶವಾಗಿದೆ. ಮಾಧವರಾವ್ ಬಲ್ಲಾಳ್ ಪ್ರಧಾನ್ ಅಂದರೆ ಹಿರಿಯ ಮಾಧವರಾವ್ ಪೇಶ್ವೆ ಎಂಬುದು ಸ್ಪಷ್ಟವಾಗಿದೆ. ೧೬೯೫ ರಲ್ಲಿ ಕುಂಭಕೋಣಂ ಮಠದ ಶ್ರೀ ವರದೇಂದ್ರ ತೀರ್ಥ ಸ್ವಾಮಿಗಳು ಗೋಕರ್ಣ ಪರ್ತಗಾಳಿ ಮಠಾಧೀಶ ಶ್ರೀ ಶ್ರೀಕಾಂತ ತೀರ್ಥರಿಗೆ ವೈಶಾಖ-೨ ರಂದು ನಮಸ್ಕಾರ ಪೂರ್ವಕ ಪತ್ರಬರೆದಿದ್ದು ಈ ಪತ್ರದಲ್ಲಿ ಶ್ರೀ ವರದೇಂದ್ರ ತೀರ್ಥರು ಶ್ರೀಕಾಂತ ತೀರ್ಥರನ್ನು ಅಭಿನಂದಿಸುತ್ತಾ “ನಾವು ಸಂಚಾರದಲ್ಲಿದ್ದೇವೆ, ನಮಗೆ ತಮ್ಮ ಯಾವುದೇ ಕ್ಷೇಮ ಸಮಾಚಾರ ಸಿಕ್ಕುತ್ತಿಲ್ಲ. ಹೀಗಾಗಬಾರದು. ಈ ಪತ್ರದೊಂದಿಗೆ ಅನಂತಾಚಾರ್ಯರ ಸಹ ಶ್ರೀ ಫಲಗಂಧ ಪ್ರಸಾದ್ ಹಾಗೂ ಶಾಲು ಕಳುಹಿಸಿದೆ. ಸ್ವೀಕರಿಸುವದು. ಪ್ರಸ್ತುತ ಭುವನಪತಿ ಸಂಸ್ಥಾನಕ್ಕೆ ದ್ರೋಹ ಬಗೆದಿದ್ದಾರೆ. ಅವರೊಂದಿಗೆ ವ್ಯವಹರಿಸ ಬಾರದು" ಎಂದು ಸೂಚಿಸಿದ್ದಾರೆ. ಶ್ರೀ ಶ್ರೀಕಾಂತ ತೀರ್ಥ ಗುರುವರ್ಯರು ೧೭೦೮ ವರ್ಷದಂದು ಪರ್ತಗಾಳಿ ಮಠದಲ್ಲಿ ಆಷಾಢ ಶುಕ್ಲ-೯ ಯಂದು ಮೋಕ್ಷಾರೂಢರಾದರು. ಪರ್ತಗಾಳಿ ಮಠದಲ್ಲಿ ವೃಂದಾವನಸ್ತ ಮೊದಲ ಗುರುವರ್ಯರು. ಅವರ ವೃಂದಾವನ ಪರ್ತಗಾಳಿ ಮಠದಲ್ಲಿದೆ.