Taking too long? Close loading screen.

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

16 Laxminath Kannada

ಶ್ರೀ ಲಕ್ಷ್ಮೀನಾಥ ತೀರ್ಥರು

ಜನ್ಮ ಸ್ಥಳ : ಮುರ್ಡೇಶ್ವರ (ಉತ್ತರ ಕನ್ನಡ)
ಜನ್ಮ ದಿನಾಂಕ : ಶ್ರೀ ಶಕೆ ೧೭೧೫ ಪ್ರಮಾದೀಚ ಸಂವತ್ಸರ ಚೈತ್ರ ಶುಕ್ಲ-೨ ಬುಧವಾರ (೧೩-೦೩-೧೭೯೩)
ಸಂನ್ಯಾಸದೀಕ್ಷೆ : ಶ್ರೀ ಶಕೆ ೧೭೨೬ ರಕ್ತಾಕ್ಷಿ ಸಂವತ್ಸರ ಚೈತ್ರ ಶುಕ್ಲ-೮ ಮಂಗಳವಾರ (೧೭-೦೪-೧೮೦೪)
ದೀಕ್ಷಾ ಸ್ಥಳ : ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ವೆಂಕಟಾಪುರ
ದೀಕ್ಷಾಗುರು : ಶ್ರೀ ರಾಮನಾಥ ತೀರ್ಥ (೧೫)
ಗುರು ಪೀಠಾರೋಹಣ : ಶ್ರೀ ಶಕೆ ೧೭೨೬ ರಕ್ತಾಕ್ಷಿ ಸಂವತ್ಸರ ಚೈತ್ರ ಶುಕ್ಲ-೯ ಬುಧವಾರ (೧೮-೦೪-೧೮೦೪)
ಶಿಷ್ಯಸ್ವೀಕಾರ : ಶ್ರೀ ಆನಂದತೀರ್ಥ (೧೮)
ಮಹಾನಿರ್ವಾಣ : ಶ್ರೀಶಕೆ ೧೭೪೩ ವೃಷಭ ಸಂ. ಮಾರ್ಗಶೀರ್ಷ ವದ್ಯ ನವಮಿ ಸೋಮವಾರ (೧೭-೧೨-೧೮೨೧)
ವೃಂದಾವನ ಸ್ಥಳ : ಬರೋಡಾ
ಶಿಷ್ಯಕಾಲಾವಧಿ : ೧ ದಿನ
ಗುರುಪೀಠದ ಅವಧಿ : ೧೭ ವರ್ಷ ೦೭ ತಿಂಗಳು ೨೯ ದಿನಗಳು
ಮಠದ ಸೇವಾ ಅವಧಿ : ೧೭ ವರ್ಷ ೦೭ ತಿಂಗಳು ೨೯ ದಿನಗಳು
ಜೀವಿತಾವಧಿ : ೨೮ ವರ್ಷ ೦೯ ತಿಂಗಳು ೦೪ ದಿನಗಳು
ಮಠ ಸ್ಥಾಪನೆ : ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ವೆಂಕಟಾಪುರ,

ಶ್ರೀಶಕೆ ೧೭೩೯ ಈಶ್ವರ ಸಂ. ಜ್ಯೇಷ್ಠ ಶು-೩ (೧೯-೦೫-೧೮೧೭)

ಅಲೌಕಿಕ ಕಾರ್ಯ : ಬರೋಡಾ ರಾಜನಿಗೆ ಪುತ್ರ ಸಂತಾನದ ಅನುಗ್ರಹ.
ಮಠದ ಜೀರ್ಣೋಧ್ಧಾರ : ಗೋಕರ್ಣ ಮಠದ ಸಂಪೂರ್ಣ ಜೀರ್ಣೋಧ್ಧಾರ,
ಮಠದ ಮುಂಭಾಗದಲ್ಲಿ ಮಾರುತಿ ಗುಡಿ ಪ್ರತಿಷ್ಠಾಪನೆ.

ಸ್ವಾಮೀಜಿಯ ಇತಿಹಾಸ

ಮಠ ಪರಂಪರೆಯ ಹದಿನಾರನೇ ಗುರುವರ್ಯ ಶ್ರೀ ಲಕ್ಷ್ಮೀನಾಥ ತೀರ್ಥರಿಗೆ ಅವರ ವಯೋಮಾನದ ಕೇವಲ ೧೧ ನೇ
ವಯಸ್ಸಿನಲ್ಲಿ ಶ್ರೀ ರಮಾನಾಥ ತೀರ್ಥರು (೧೫) ವೆಂಕಟಾಪುರ ಮಠದಲ್ಲಿ ನಿರ್ವಾಣದ ಸಮಯದಲ್ಲಿ ಸಂನ್ಯಾಸ ದೀಕ್ಷೆ
ನೀಡಿದರು. ಶ್ರೀ ಶಕೆ ೧೭೨೬ ಅಧಿಕ ಚೈತ್ರ ಶುಕ್ಲ ನವಮಿಯಂದು ಗುರುವರ್ಯ ಶ್ರೀ ರಮಾನಾಥ ತೀರ್ಥರ ಮಹಾನಿರ್ವಾಣದ
ನಂತರ ಅವರ ಶಿಷ್ಯ ಶ್ರೀ ಲಕ್ಷ್ಮೀನಾಥ ತೀರ್ಥರು ಗುರುಪೀಠಾರೋಹಣ ಮಾಡಿದರು.
ಗುರುಗಳ ನಿರ್ವಾಣದ ನಂತರ ಅವರು ಸುಮಾರು ಐದು-ಆರು ವರ್ಷಗಳ ಕಾಲ ಉತ್ತಮ ಪಂಡಿತರಿಂದ ಶಿಕ್ಷಣ
ಪಡೆದರು. ಹದಿನೆಂಟು ವರ್ಷಗಳ ಕಾಲ ಅವರು ತಮ್ಮ ಗುರುಪೀಠವನ್ನಾಳಿದ್ದಾರೆ. ಈ ಸಮಯದಲ್ಲಿ ಅವರು ಸಂಚಾರ,
ತೀರ್ಥಯಾತ್ರೆ ಮಾಡಿದರು. ಗೋಕರ್ಣದಲ್ಲಿಯ ಮಠವನ್ನು ಪುನರ್ನಿರ್ಮಾಣ ಮಾಡುವುದು ಅವರ ಪ್ರಮುಖ
ಉದ್ದೇಶವಾಗಿತ್ತು. ಪರಂಪರೆಯ ಮೂರನೇ ಯತಿವರ್ಯರಾದ ಶ್ರೀ ಜೀವೋತ್ತಮ ತೀರ್ಥರು ಗೋಕರ್ಣದಲ್ಲಿ ನರಸು
ಕೇಣಿಯವರು ನೀಡಿದ್ದ ಹಳೆಯ ಮಠವನ್ನು ಮಾರ್ಪಡಿಸಿ ಗೋಕರ್ಣದ ಮಠವನ್ನು ಉದ್ಘಾಟಿಸಿದರು. ಮೂಲ ಮಠವನ್ನು
ಆರನೇ ಆಚಾರ್ಯ ಶ್ರೀ ರಾಮಚಂದ್ರ ತೀರ್ಥರು ನವೀಕರಿಸಿದ್ದರು ಮತ್ತು ಶ್ರೀ ಲಕ್ಷ್ಮೀನಾಥ ತೀರ್ಥರು ಸ್ಥಳಾಂತರಿತ
ಮಠವನ್ನು ಜೀರ್ಣೋದ್ಧಾರ ಮಾಡಿ ಮಾರುತಿಯ ಗೋಪುರಗುಡಿ (ಮಾರುತಿಘೂಡ) ಮಠದ ಮುಂಭಾಗದಲ್ಲಿ
ಸ್ಥಾಪಿಸಿದರು. ಪರಂಪರೆಯ ಹದಿಮೂರನೆಯ ಯತಿವರ್ಯ ಶ್ರೀಕಾಂತ ತೀರ್ಥರು ಈ ಮಠವನ್ನು ಜೀರ್ಣೋದ್ಧಾರ ಮಾಡಲು
ಕೆಲವು ಪ್ರಯತ್ನಗಳನ್ನು ಮಾಡಿದರು ಆದರೆ ಅದು ಯಶಸ್ವಿಯಾಗಲಿಲ್ಲ ಎಂದು ಪತ್ರವ್ಯವಹಾರವು ತೋರಿಸುತ್ತದೆ. ಇವರ
ಅವಧಿಯಲ್ಲಿ ಹಳೆಯ ಭಟ್ಕಳ, ಬಸ್ರೂರು, ಅಂಕೋಲಾ, ಅವರ್ಸಾ ಮಠಗಳ ಸಂಪೂರ್ಣ ಜೀರ್ಣೋದ್ಧಾರ ನಡೆದಿದೆ.
ಶ್ರೀ ಲಕ್ಷ್ಮೀನಾಥ ತೀರ್ಥರು ಹಲವಾರು ತೀರ್ಥಯಾತ್ರೆಗಳನ್ನು ಮಾಡಿದ್ದರು ಎಂದು ಲಿಖಿತ ದಾಖಲೆಗಳಿಂದ
ತಿಳಿದುಬರುತ್ತದೆ. ೧೭೪೦ ರಲ್ಲಿ ಅವರು ಸಂಚಾರದಲ್ಲಿದ್ದಾಗ ಕುಂಭಕೋಣಂನ ಸುಜನೇಂದ್ರ ತೀರ್ಥ ಸ್ವಾಮಿಗಳು ತಮ್ಮ
ಶಿಷ್ಯರಿಗೆ ರಾಯಸವನ್ನು ಕಳುಹಿಸಿ ಅವರಿಗೆ ಎಲ್ಲಾ ರೀತಿಯ ಸಹಾಯವನ್ನು ನೀಡುವಂತೆ ಸಂದೇಶವನ್ನು ಕಳುಹಿಸಿದ್ದು
ಪತ್ರಗಳಿಂದ ತಿಳಿದುಬರುತ್ತದೆ.
ಶ್ರೀ ಲಕ್ಷ್ಮೀನಾಥ ತೀರ್ಥರು ದಕ್ಷಿಣಕ್ಕೆ ತಿರುಪತಿ, ರಾಮೇಶ್ವರ ಮುಂತಾದೆಡೆ ಪ್ರಯಾಣ ಬೆಳೆಸಿದರು. ಅವರು
ಪಂಢರಪುರಕ್ಕೆ ಹೋಗಿ ವಿಟ್ಠಲನ ದರ್ಶನ ಪಡೆದು ಉತ್ತರ ದಿಕ್ಕಿಗೆ ತೀರ್ಥಯಾತ್ರೆಗೆ ಹೋದರು. ಈ ಯಾತ್ರೆಯಲ್ಲಿ
ಭಾಗೀರಥಿಯಲ್ಲಿ ಸ್ನಾನ ಮಾಡಿದರೆಂದು ಉಲ್ಲೇಖಿಸಲಾಗಿದೆ. ಅವರು ಬರೋಡಾಗೆ ಹೋದ ಬಗ್ಗೆ ಸಾಕ್ಷ್ಯಾಧಾರಗಳು
ಲಭ್ಯವಿವೆ. ಈ ಮಾಹಿತಿ ನೀಡುವ ಮೊದಲು ಬರೋಡಾದ ರಾಜನಿಗೆ ಪುತ್ರ ಸಂತಾನದ ಅನುಗ್ರಹ ಮಾಡಿದ ಘಟನೆ ಈ ರೀತಿ
ಇದೆ.
ಶ್ರೀ ಲಕ್ಷ್ಮೀನಾಥ ತೀರ್ಥರು ಯಾತ್ರೆಯಲ್ಲಿದ್ದಾಗ ಉತ್ತರದ ಬರೋಡಾವನ್ನು ತಲುಪಿದಾಗ ಶಕೆ ೧೭೪೩
ಮಾರ್ಗಶೀರ್ಷ ಷಷ್ಟಿಯಂದು ಬರೋಡಾದ ಮಹಾರಾಜನು ಸಪತ್ನಿಕರಾಗಿ ಅವರನ್ನು ಭೇಟಿ ಮಾಡಿ ಪಾದಪೂಜೆ ಸಲ್ಲಿಸಿದರು.
ಈ ರಾಜ ದಂಪತಿಗಳಿಗೆ ಪುತ್ರ ಸಂತಾನವಿಲ್ಲದ ಕಾರಣ ದುಖಿಃತರಾಗಿದ್ದು ಅವರು ತಮ್ಮ ಪುತ್ರ ಕಾಮನೆಯನ್ನು
ಶ್ರೀಗಳವರಲ್ಲಿ ವ್ಯಕ್ತಪಡಿಸಿ ಪುತ್ರರತ್ನವನ್ನು ಅನುಗ್ರಹಿಸುವಂತೆ ವಿನಂತಿಸಿದರು. ಶ್ರೀಗಳವರು ಅವರಿಗೆ ಪುತ್ರ ಸಂತಾನಕ್ಕಾಗಿ
ಮಂತ್ರಪೂರಿತ ಫಲವನ್ನು ನೀಡಿದರು. ದಂಪತಿಗಳು ಅದನ್ನು ಸೇವಿಸಿದರು. ಪುತ್ರನ ಜನನದ ನಂತರವೇ ಶ್ರೀಸ್ವಾಮಿಯನ್ನು
ಅಲ್ಲಿಂದ ಪ್ರಯಾಣ ಮಾಡುವಂತೆ ವಿನಂತಿಸಿಕೊಂಡರು. ವಿನಂತಿಯನ್ನು ಸ್ವೀಕರಿಸಿದ ಶ್ರೀಸ್ವಾಮಿಗಳು ಬರೋಡಾದಲ್ಲಿ
ಕೆಲಕಾಲ ವಾಸ್ತವ್ಯದಲ್ಲಿದ್ದರು, ನಂತರ ರಾಜನಿಗೆ ಪುತ್ರ ಸಂತಾನ ಪ್ರಾಪ್ತಿಯಾದಾಗ ಶ್ರೀಗಳವರು ನಿರ್ವಾಣ ಹೊಂದಿದ್ದರೂ
ಶ್ರೀಗಳವರು ರಾಜವಂಶದ ದೇವತೆಯಾಗಿ ಪರಿಗಣಿತರಾದರು.
ಆಗ ಬರೋಡಾದಲ್ಲಿ ನೆಲೆಸಿದ್ದ ಗಣಪತ್ ರಾಮಚಂದ್ರ ಎಂಬ ಗೃಹಸ್ಥರು ಮುಂಬೈನಲ್ಲಿ ನೆಲೆಸಿದ್ದ ತನ್ನ ಆಪ್ತ
ಅನಂತ ಭಂಡಾರಿಗೆ ಶ್ರೀ ಶಕೆ ೧೭೪೩ ಮಾರ್ಗಶೀರ್ಷ ಕೃಷ್ಣ ನವಮಿಯ ದಿನ ಅಂದರೆ ಸ್ವಾಮೀಜಿಯವರ ಮೋಕ್ಷಾರೂಢರಾದ
ದಿನ ಒಂದು ಪತ್ರ ಕಳುಹಿಸಿರುತ್ತಿದ್ದು ಅದರಲ್ಲಿ ಶ್ರೀಸ್ವಾಮಿಗಳು ಬರೋಡಾಕ್ಕೆ ಬಂದು ಹದಿನೈದು ದಿನಗಳ ನಂತರ ವದ್ಯ

ನವಮಿಯಂದು ಸಮಾಧಿಸ್ಥರಾದರು ಎಂದು ತಿಳಿಸಿದ್ದರು. ಈ ಪತ್ರದ ನಕಲು ಶ್ರೀಮಠದ ಕಡತದಲ್ಲಿ ಲಭ್ಯವಿದೆ ಅದರಲ್ಲಿ
ಈ ರೀತಿ ಬರೆಯಲಾಗಿದೆ.
“ಅಪತ್ಯ ಗಣಪತ್ ರಾಮಚಂದ್ರ ವಾಗ್ಳೆ ಸಾದರ ನಮಸ್ಕಾರ. ಮಾರ್ಗಶೀರ್ಷ ವದ್ಯ ನವಮಿಯ ತನಕ ಎಲ್ಲಾ
ಮಂಡಳಿಯು ಸುಖರೂಪದಲ್ಲಿದೆ. ತಮ್ಮಿಂದ ಪತ್ರ ಬಂದು ಬಹಳೇ ದಿನಗಳಾದವು. ಅಲ್ಲಿಯ ಸಮಾಚಾರ ತಿಳಿಯುತ್ತಿಲ್ಲ.
ನಿರಂತರವಾಗಿ ಪತ್ರ ವ್ಯವಹಾರ ಮಾಡಿದಲ್ಲಿ ಮನಸ್ಸಿಗೆ ಸಂತೋಷವಾಗುತ್ತದೆ ಅದರಿಂದ ಮನಸ್ಸಿಗೆ ಸಮಾಧಾನವಾಗುತ್ತದೆ.
ಇಲ್ಲಿ ಶ್ರೀ ಲಕ್ಷ್ಮೀನಾಥ ತೀರ್ಥ ಸ್ವಾಮಿಗಳು ಮಾರ್ಗಶೀರ್ಷ ಶುದ್ಧ ಷಷ್ಠಿ ಶುಕ್ರವಾರ ಸಂಜೆ ಬರೋಡಾಕ್ಕೆ ಬಂದರು. ಆ ದಿನ
ಅವರಿಗೆ ತಗುಲಿದ ಜ್ವರದಿಂದ ಅವರು ಹೈರಾಣಾರಾಗಿದ್ದರು. ಅನೇಕ ಔಷಧೋಪಚಾರವನ್ನು ಮಾಡಿದರೂ
ಪ್ರಯೋಜನವಾಗಲಿಲ್ಲ. ಮುಂದಿನ ಯಾತ್ರೆಗೆ ಹೋಗುವದು ಸಮಂಜಸವಲ್ಲ ಎಂದು ನಿರ್ಧರಿಸಿ ಇಲ್ಲೇ ಕೆಲಕಾಲ ಇರಲು
ನಿರ್ಧರಿಸಿದರು. ನಂತರ ಮಾರ್ಗಶೀರ್ಷ ವದ್ಯ ನವಮಿಯಂದು ಅವರು ಸಮಾಧಿಸ್ಥರಾದರು. ಈಶ್ವರೀ ಶಕ್ತಿಯ ಮುಂದೆ ಏನೂ
ನಡೆಯುವದಿಲ್ಲ. ಅವರ ದೇವತಾರ್ಚನೆಯ ಸರಕುಗಳನ್ನು ಕೆಲವೇ ದಿನಗಳಲ್ಲಿ ಇಲ್ಲಿಂದ ಬಂದೋಬಸ್ತಿನಲ್ಲಿ
ರವಾನಿಸುತ್ತೇನೆ.”
ಬರೋಡಾದಿಂದ ವಾಗ್ಳೆಯವರ ಪತ್ರ ತಲುಪಿದ ಮರುದಿನ ಅಂದರೆ ಶಕೆ ೧೭೪೩ ಪೌಷ ಶುದ್ಧ ಪ್ರತಿಪದೆಯಂದು
ಅನಂತ ಕೇಶವ ಭಂಡಾರಿಯವರು ಪರ್ತಗಾಳಿಯಲ್ಲಿರುವ ಶ್ರೀ ಆನಂದತೀರ್ಥ ಸ್ವಾಮಿಗಳಿಗೆ ಪ್ರಸ್ತುತ ವಾರ್ತೆಯನ್ನು ತಿಳಿಸುವ
ಪತ್ರವನ್ನು ಬರೆದು ಈ ದುಃಖದ ವಿಷಯವನ್ನು ತಿಳಿಸಿದರು.