ಜೀವೋತ್ತಮ ಪುರಸ್ಕಾರ
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೊತ್ತಮ ಮಠದ ಭಕ್ತರು, ಮಠಾನುಯಾಯಿಗಳು ದೇಶದ ಅನೇಕ ಭಾಗಗಳಲ್ಲಿ ಚದುರಿಹೋಗಿದ್ದಾರೆ. ಮಠದಿಂದ ಎಷ್ಟೇ ದೂರವಿದ್ದರೂ ಅವರ ಗುರುಭಕ್ತಿ, ಸ್ವಾಮಿನಿಷ್ಠೆ ಎಂದಿಗೂ ಕಡಿಮೆಯಾಗಿಲ್ಲ. ಹೇಗಾದರೂ, ಎಲ್ಲಿಯಾದರೂ ಕನಿಷ್ಠಪಕ್ಷ ವರ್ಷಕ್ಕೆ ಒಂದು ಸಲವಾದರೂ ಗುರುದರ್ಶನವನ್ನು ಮಾಡಿ ಅವರಿಂದ ಮಂತ್ರಾಕ್ಷತೆಯನ್ನು ಪಡೆಯುತ್ತಾರೆ. ಕುಲದೇವರಲ್ಲಿ ಎಷ್ಟು ಶೃದ್ಧೆಯೋ ಹಾಗೆಯೇ ಕುಲಗುರುಗುಳಲ್ಲಿಯೂ ಅಷ್ಟೇ ನಿಷ್ಠೆ. ಗೌಡ ಸಾರಸ್ವತ ಸಮಾಜದ ಈ ನಿಷ್ಠೆಯಿಂದ ಇತರ ಸಮಾಜವೂ ನಮ್ಮನ್ನು ಗೌರವಾದರದಿಂದ ಕಾಣುವಂತಾಗಿದೆ. ಈ ಮಾತನ್ನು ಇತರ ಸಮಾಜದ ಕೆಲವು ಪೀಠಾಧಿಪತಿಗಳು ತಮ್ಮ ಅನುಯಾಯಿಗಳಿಗೆ ಆಡಿಯೂ ತೋರಿಸಿದ್ದಾರೆ. ಹೀಗೆ ದೇವಗುರುಗಳಲ್ಲಿರುವ ನಮ್ಮ ಭಯಭಕ್ತಿಗಳಿಂದಾಗಿ ನಮಗೆಂದು ಸೋಲಿಲ್ಲ. ಗುರುಗಳ ಮಾರ್ಗದರ್ಶನದಿಂದ ನಮ್ಮ ಸಮಾಜ ಅಭಿವೃದ್ಧಿಯನ್ನು ಪಡೆಯುತ್ತಿದೆ. ಅನೇಕ ಮಠಾನುಯಾಯಿಗಳು ತಮ್ಮ ದಿನನಿತ್ಯದ ವ್ಯವಹಾರದೊಂದಿಗೆ ಸಮಾಜಕ್ಕೆ ವಿವಿಧ ರೀತಿಯಲ್ಲಿ ತಮ್ಮ ಕೈಲಾದ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಅದು ಶೈಕ್ಷಣಿಕ, ವೈದ್ಯಕೀಯ, ವೈವಾಹಿಕ ಅಥವಾ ಸಮಾಜದ ದೇವಮಂದಿರಗಳಲ್ಲಿ ಇಲ್ಲವೆ ಶಾಖಾಮಠಗಳಲ್ಲಿ ಹೀಗೆ ಯಾವುದಾದರೊಂದು ಕ್ಷೇತ್ರದಲ್ಲಿ ತಮ್ಮ ಜೀವನದಲ್ಲಿ ಯಾವುದಾದರೊಂದು ರೂಪದಲ್ಲಿ ಸಮಾಜದ ಸೇವೆಮಾಡುತ್ತಾ ಬಂದಿದ್ದಾರೆ. ಸಮುದ್ರದಾಳದಿಂದ ಅಂತಹ ರತ್ನಗಳನ್ನು ಆರಿಸಿ ಸಮಾಜದ ಮುಂದಿಡುವ ಕೆಲಸವನ್ನು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠದ ವಿದ್ಯಮಾನ ಯತಿವರ್ಯರು ೨೦೧೧ನೆಯ ಇಸವಿಯಿಂದ ಆರಂಭಿಸಿದ್ದಾರೆ. ಸಮಾಜಕ್ಕೆ, ಶಾಖಾಮಠಕ್ಕೆ, ಕೇಂದ್ರಮಠಕ್ಕೆ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿದ ಸಮಾಜದ ಎರಡು ವ್ಯಕ್ತಿಗಳನ್ನು ಆರಿಸಿ ಮಠದ ಸಂಸ್ಥಾಪನ ದಿನವಾದ ಚೈತ್ರಶುಕ್ಲ ದ್ವಿತೀಯೆಯಂದು ಜೀವೋತ್ತಮ ಪುರಸ್ಕಾರದಿಂದ ಅವರನ್ನು ಸನ್ಮಾನಿಸಲಾಗುತ್ತದೆ. ಅವರಿಗೆ ದೊರೆತ ಈ ಸನ್ಮಾನ ಅಖಂಡ ಗೌಡಸಾರಸ್ವತ ಸಮಾಜದಿಂದ ಸಿಕ್ಕ ಗೌರವ. ಅವರ ಜೀವನದಲ್ಲಿ ಇದೊಂದು ಅಮೂಲ್ಯಕ್ಷಣ. ಈ ಸನ್ಮಾನ ಇತರರಿಗೆ ಪ್ರೇರಣೆಯೂ, ಸ್ಪೂರ್ತಿದಾಯಕವೂ ಆಗಿದೆ.
ಜೀವೋತ್ತಮ ಪುರಸ್ಕೃತರು
ಕ್ರ.ಸಂ | ವರ್ಷ | ಹೆಸರು | ಊರು |
೧ | ೨೦೧೧ | ಗಜಾನನ ಬಾಬುರಾವ ಭಟ್ಟ | ಯಲ್ಲಾಪುರ |
೨ | ೨೦೧೧ | ಹನುಮಂತ ಮ್ಹಾಳಪ್ಪಾ ಪೈ.(ಪುತ್ತು ಪೈ) | ಭಟ್ಕಳ |
೩ | ೨೦೧೨ | ಸುಧಾಕರ ದಾಸಪ್ಪಾ ಶ್ಯಾನಭಾಗ | ಬೆಳಗಾಂವಿ |
೪ | ೨೦೧೨ | ಕೃಷ್ಣಕುಮಾರ ನಾಗಪ್ಪಾ ಪೈ | ಬೆಳಗಾಂವಿ |
೫ | ೨೦೧೩ | ಶಿವಾನಂದ ವಾಸುದೇವ ಸಾಳಗಾಂವ್ಕರ | ವಾಸ್ಕೊ |
೬ | ೨೦೧೩ | ರಾಮಚಂದ್ರ ನಾರಾಯಣ ನಾಯಕ | ಹುಬ್ಬಳ್ಳಿ |
೭ | ೨೦೧೪ | ಎಸ್. ಪ್ರಭಾಕರ ಕಾಮತ | ಮಂಗಳೂರು |
೮ | ೨೦೧೪ | ಜಿ. ಎಸ್. ಕಾಮತ | ಕುಮಟಾ |
೯ | ೨೦೧೫ | ಶಿವಾನಂದ ಲಕ್ಷ್ಮಣ ಕಾಮತ | ಮಂಗಳೂರು |
೧೦ | ೨೦೧೫ | ಕೃಷ್ಣಾ ಬಾಬಾ ಪೈ | ಕುಮಟಾ |