Taking too long? Close loading screen.

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

3 Jeevottam Kannada

ಶ್ರೀಮದ್ ಜೀವೋತ್ತಮ ತೀರ್ಥ

ಜನ್ಮಸ್ಥಳ : ಬಸರೂರು (ಉಡುಪಿ ಜಿಲ್ಲೆ)
ಸಂನ್ಯಾಸ ದೀಕ್ಷೆ : ಶ್ರೀ ಶಕೆ ೧೪೩೯ ಈಶ್ವರ ಸಂವತ್ಸರ ಮಾಘ ಶು-೧೪ ಸೋಮವಾರ (೦೪-೦೨-೧೫೧೮)
ದೀಕ್ಷಾ ಸ್ಥಳ : ವಡೇರ ಮಠ ಭಟ್ಕಳ
ದೀಕ್ಷಾಗುರು : ಶ್ರೀಮದ್ ಶ್ರೀವಾಸುದೇವ ತೀರ್ಥರು (೨)
ಶಿಷ್ಯಸ್ವೀಕಾರ : ಶ್ರೀಮದ್ ಅಣುಜೀವೋತ್ತಮ ತೀರ್ಥ (೪)
ಮಹಾನಿರ್ವಾಣ : ಶ್ರೀಶಕೆ ೧೫೧೦ ಸರ್ವಧಾರಿ ಸಂವತ್ಸರ ಭಾದ್ರಪದ ಶುಕ್ಲ ಪಂಚಮಿ ಶನಿವಾರ (೨೭-೦೮-೧೫೮೮)
ವೃಂದಾವನ ಸ್ಥಳ : ಗೋಪಿನದಿ ತೀರ ಭಟ್ಕಳ
ಶಿಷ್ಯತ್ವದ ಕಾಲಾವಧಿ : ೦೫ ತಿಂಗಳು ೨೯ ದಿನಗಳು.
ಗುರುಪೀಠದ ಕಾಲಾವಧಿ : ೭೦ ವರ್ಷ ೦೪ ತಿಂಗಳು ೦೪ ದಿನಗಳು
ಮಠಸೇವಾವಧಿ : ೭೫ ವರ್ಷ ೧೫ ತಿಂಗಳು ೦೩ ದಿನಗಳು
ಮಠದ ಸ್ಥಾಪನೆ : ೧ ಜೀವೋತ್ತಮ ಮಠ ಗೋಕರ್ಣ (ಭೂವಿಜಯ ವಿಟ್ಠಲ ಪಂಚಧಾತು ಪ್ರತಿಮೆ)
೨ ಜೀವೋತ್ತಮ ಮಠ ಬಸ್ರೂರು (ದಿಗ್ವಿಜಯ ವಿಠ್ಠಲ ಪಂಚಧಾತು ಪ್ರತಿಮೆ)

ಸ್ವಾಮೀಜಿಯ ಇತಿಹಾಸ

ವಿಟ್ಠಲತ್ರಯಲಬ್ಧಾರಂ ವಾದಿರಾಜಯತಿಪ್ರಿಯಮ್ ।
ಜೀವೋತ್ತಮಗುರು ವಂದೇ ವಿಮಾನೇನ ದಿವಂ ಗತಮ್ ।

ಗೋಕರ್ಣ ಕ್ಷೇತ್ರದಲ್ಲಿ ಮಠ ಸ್ಥಾಪನೆಯಾದ ಕಾರಣ ಭಟ್ಕಳದಲ್ಲಿ ಸ್ಥಾಪಿಸಿದ ಶ್ರೀ ನಾರಾಯಣತೀರ್ಥರ ಮಠಕ್ಕೆ ಗೋಕರ್ಣ ಮಠ ಎಂಬ ಹೆಸರು ಬಂದಿತು ಮತ್ತು ಗೋಕರ್ಣ ಮಠವನ್ನು ಕಟ್ಟಿದ ಜೀವೋತ್ತಮತೀರ್ಥರಿಂದಾಗಿ ಗೋಕರ್ಣ ಮಠದ ಹೆಸರಿನಲ್ಲಿ ಜೀವೋತ್ತಮ ಹೆಸರು ಸೇರಿಕೊಂಡಿತು. ಪರಂಪರೆಯಿಂದ ಅವರು ಗೋಕರ್ಣ ಪರ್ತಗಾಳಿ-ಜೀವೋತ್ತಮ ಮಠದ ಮೂರನೇ ಆಚಾರ್ಯರಾಗಿದ್ದರು. ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಸ್ರೂರ ಎಂಬ ಹಳ್ಳಿಯಲ್ಲಿ ಜನಿಸಿದರು. ೧೪೩೯ ರಲ್ಲಿ ಅವರಿಗೆ ಶ್ರೀ ವಾಸುದೇವತೀರ್ಥರು ತೀರ್ಥಯಾತ್ರೆಗೆ ಹೋಗುವ ಮೊದಲು ಭಟ್ಕಳ ಮಠದಲ್ಲಿ ಈಶ್ವರ ಸಂವತ್ಸರ ಮಾಘ ಶುದ್ಧ ಚತುರ್ದಶಿ ಯಂದು ಆಶ್ರಮ ದೀಕ್ಷೆಯನ್ನು ನೀಡಿದರು.
ಜೀವೋತ್ತಮತೀರ್ಥರದು ತೀಕ್ಷ್ಣ ವ್ಯಕ್ತಿತ್ವ. ಅವರ ಸುದೀರ್ಘ ಜೀವನವನ್ನು ತಪಸ್ವಿ, ಮನಸ್ವಿ ಮತ್ತು ಯಶಸ್ವಿ ಎಂಬ ಮೂರು ಪದಗಳಲ್ಲಿ ವಿವರಿಸಬಹುದು. ಗುರುಪೀಠದಲ್ಲಿ ಅವರ ಎಪ್ಪತ್ತು ವರ್ಷಗಳ ಸುದೀರ್ಘ ಜೀವನವು ವಿವಿಧ ಘಟನೆಗಳು ಮತ್ತು ಪವಾಡಗಳಿಂದ ತುಂಬಿದೆ. ಶ್ರೀಮಧ್ವಾಚಾರ್ಯರಂತೆ ದ್ವೈತ ಮತದ ಮೂಲತತ್ತ್ವಗಳನ್ನು ಪ್ರತಿಪಾದನೆ ಮಾಡುತ್ತ ಶ್ರೀ ಜೀವೋತ್ತಮ ತೀರ್ಥರು ಸ್ವಲ್ಪ ಮಟ್ಟಿಗೆ ಮಧ್ವಾಚಾರ್ಯರು ಮಾಡಿದ ಪವಾಡಗಳನ್ನು ಮತ್ತು ಜ್ಞಾನ ಮತ್ತು ಯೋಗದ ಶಕ್ತಿಯ ಸಾಕ್ಷಾತ್ಕಾರವನ್ನು ಮಾಡಿತೋರಿಸಿದರು ಎಂದು ಹೇಳಬಹುದು.
ಮಧ್ವಾಚಾರ್ಯರಂತೆ, ಜೀವೋತ್ತಮತೀರ್ಥರು ತೀರ್ಥಯಾತ್ರೆಗಾಗಿ ದೇಶದ ತುಂಬ ಸಂಚರಿಸಿದರು. ಅವರ ತೀರ್ಥಯಾತ್ರೆಯ ಕಥೆಯನ್ನು ಗುರುಪರಂಪರಾಮೃತದಲ್ಲಿ ವಿವರಿಸಲಾಗಿದೆ. ತೀರ್ಥಯಾತ್ರೆಯಲ್ಲಿದ್ದಾಗ ಅವರು ಬಿಜಾಪುರದಲ್ಲಿ ವಾಸ್ತವ್ಯಮಾಡಬೇಕಾಯಿತು. ಆ ಸಮಯದಲ್ಲಿ ಅಲಿ ಆದಿಲ್ ಶಾ ಬಿಜಾಪುರದ ಚಕ್ರವರ್ತಿಯಾಗಿದ್ದನು. ಅವನು ಈ ಹಿಂದು ಸಂನ್ಯಾಸಿಯನ್ನು ಸತ್ಕರಿಸಿ ಗೌರವಿಸಿದನು. ಆ ಸಮಯದಲ್ಲಿ ಸಾಮ್ರಾಜ್ಯಶಾಹಿಶಕ್ತಿಯು ಹೆಚ್ಚಾಗಿ ಹಿಂದೂ ಮುಖ್ಯಸ್ಥರ ಮೇಲೆ ಅವಲಂಬಿತವಾಗಿರುವುದರಿಂದ ಹಿಂದೂ ಅಚಾರ್ಯರನ್ನು ಸತ್ಕರಿಸಿದ್ದು ಅಸಾಧ್ಯವೆಂದು ಹೇಳಲಾಗುವದಿಲ್ಲ. ಚಕ್ರವರ್ತಿಯು ಆಚಾರ್ಯರನ್ನು ಸ್ವಾಗತಿಸಿದ್ದು ನಿಜ, ಆದರೆ ಅವರಿಗೆ ಕಳುಹಿಸಲಾದ ಉಡುಗೊರೆಯಲ್ಲಿ ಪರೀಕ್ಷಿಸಲು ಮಾಂಸವನ್ನು ಇಟ್ಟಿದ್ದರು. ಆಚಾರ್ಯರು ಅದನ್ನು ಅಂತರಜ್ಞಾನದಿಂದ ಅರಿತು ತಮ್ಮ ಕಮಂಡಲುವಿನಿಂದ ನೀರನ್ನು ತೆಗೆದುಕೊಂಡು ಆ ಉಡುಗರೆಯ ಮೇಲೆ ಚಿಮುಕಿಸಿದರು. ತಕ್ಷಣ ಮಾಂಸವು ಪರಿಮಳಯುಕ್ತ ಹೂವುಗಳಾಗಿ ಮಾರ್ಪಟ್ಟಿತು. ಈ ಹೂವುಗಳನ್ನು ಆಚಾರ್ಯರು ಚಕ್ರವರ್ತಿಗೆ ಉಡುಗರೆಯಾಗಿ ಮರಳಿ ಕಳುಹಿಸಿದರು. ಚಕ್ರವರ್ತಿಗೆ ಆಚಾರ್ಯರ ಯೋಗಸಾಮರ್ಥ್ಯದ ಬಗ್ಗೆ ಮನವರಿಕೆಯಾಯಿತು.
ಈ ಚಕ್ರವರ್ತಿಗೆ ಪುತ್ರ ಸಂತಾನವಿರಲಿಲ್ಲ. ಆಚಾರ್ಯರ ದೈವಿಕ ಸಾಮರ್ಥ್ಯವನ್ನು ಕಂಡು ತಮ್ಮ ಮನೋವೇದನೆಯನ್ನು ಜೀವೋತ್ತಮ ತೀರ್ಥರಲ್ಲಿ ಅರಿಕೆಮಾಡಿಕೊಂಡರು. ಆಚಾರ್ಯರು ಅವನಿಗೆ ಒಂದು ಮಂತ್ರಪೂರಿತ ಹಣ್ಣನ್ನು ಕೊಟ್ಟು ಅದನ್ನು ಅವನ ಪತ್ನಿಗೆ ತಿನ್ನಲು ಕೊಡುವಂತೆ ಆದೇಶಿಸಿದರು. ನಂತರ ಚಕ್ರವರ್ತಿಯ ರಾಣಿ ಗರ್ಭಿಣಿಯಾಗಿ ಸೂಕ್ತ ಸಮಯದಲ್ಲಿ ಅವಳು ಪುತ್ರನಿಗೆ ಜನ್ಮ ನೀಡಿದಳು. ಚಕ್ರವರ್ತಿಯು ಆಚಾರ್ಯರನ್ನು ಮತ್ತೊಮ್ಮೆ ಸನ್ಮಾನಿಸಿ ಶ್ವೇತ ಛತ್ರ, ಚಾಮರ, ಶಿಬಿಕೆ ಇತ್ಯಾದಿಗಳನ್ನು ಉಡುಗೊರೆಯಾಗಿ ನೀಡಿ ಸತ್ಕರಿಸಿದನು.
ನಂತರ ಶ್ರೀ ಜೀವೋತ್ತಮ ತೀರ್ಥರು ಉತ್ತರ ದಿಕ್ಕಿಗೆ ಯಾತ್ರೆ ಕೈಗೊಂಡರು. ಅವರು ಪ್ರಯಾಗ, ಕಾಶಿ, ಕುರುಕ್ಷೇತ್ರ, ಸರಸ್ವತಿ, ವರಾಹಪುಷ್ಕರ, ಹರಿದ್ವಾರ, ಬದರಿಕಾಶ್ರಮಗಳಿಗೆ ಪ್ರಯಾಣಿಸಿದರು. ಹಿಮಾಲಯದಲ್ಲಿ ಹುಟ್ಟುವ ಗಂಡಕಿ ನದಿಯಲ್ಲಿ ಶಾಲಿಗ್ರಾಮ ಶಿಲೆಗಳು ಸಿಗುವದರಿಂದ ಅದನ್ನು ಶಿಲಾ ನದಿ ಎಂದು ಕರೆಯಲಾಗುತ್ತದೆ. ಈ ಶಿಲಾ ನದಿಯಲ್ಲಿ ಜೀವೋತ್ತಮತೀರ್ಥರಿಗೆ ಮೂರು ಲೋಹದ ವಿಗ್ರಹಗಳು ದೊರಕಿದವು. ಅವುಗಳಿಗೆ ದಿಗ್ವಿಜಯವಿಟ್ಠಲ, ಭೂವಿಜಯವಿಟ್ಠಲ ಮತ್ತು ವೀರವಿಟ್ಠಲ ಎಂದು ಹೆಸರಿಟ್ಟು ತಮ್ಮ ಜೊತೆಗೆ ಆ ವಿಗ್ರಹಗಳನ್ನು ತೆಗೆದುಕೊಂಡು ಬಂದರು. ಜೀವೋತ್ತಮ ತೀರ್ಥರು ಈ ಶಿಲಾನದಿ (ಗಂಡಕಿ) ಬಳಿ ತಂಗಿದ್ದಾಗ ಉಡುಪಿಯ ಅಷ್ಠಮಠದ ಸೋದೆಮಠದ ಪೀಠಾಧಿಪತಿ ಶ್ರೀವಾದಿರಾಜ ತೀರ್ಥರು ತೀರ್ಥಯಾತ್ರೆಗೆ ಅಲ್ಲಿ ಬಂದಿದ್ದರು. ಅಲ್ಲಿ ಉಭಯ ಆಚಾರ್ಯರ ಭೇಟಿಯಾಯಿತು. ಪರಸ್ಪರ ಅವರ ಸತ್ಕಾರಗಳು ನಡೆದವು.
ಈ ವಾಸ್ತವ್ಯದ ಸಮಯದಲ್ಲಿ ಆಚಾರ್ಯರು ತಮ್ಮ ಜೀವನ ಯಾತ್ರೆಯನ್ನು ಕೊನೆಗೊಳಿಸುವ ಉದ್ದೇಶದಿಂದ ಶಿಲಾನದಿಯ ದಡದಲ್ಲಿ ಕುಳಿತು ಉಪವಾಸ ವೃತವನ್ನು ಪ್ರಾರಂಭಿಸಿದರು. ಆಹಾರ ಸೇವಿಸುವದನ್ನು ನಿಲ್ಲಿಸಿದ ಕೆಲವು ದಿನಗಳ ನಂತರ ಅವರಿಗೆ ಸಾಕ್ಷಾತ್ಕಾರವಾಯಿತು - ಗುರು ಪರಂಪರೆಯಲ್ಲಿ ಆಕಾಶವಾಣಿ ಆಯಿತು ಎಂದು ಹೇಳಲಾಗಿದೆ – ಅವರಿಗೆ ಈ ಈ ಮಾತುಗಳು ಕೇಳಿಬಂದವು. “ ಹೇ ಯತಿಶ್ರೇಷ್ಠರೇ ಈ ಜನ್ಮದಲ್ಲಿ ನನಗೆ ನಿಮ್ಮನ್ನು ಭೇಟಿಯಾಗಲು ಆಗುವದಿಲ್ಲ. ಉಪವಾಸವನ್ನು ಮಾಡಿ ನಿಮ್ಮ ದೇಹವನ್ನು ಕೃಶಗೊಳಿಸಿಕೊಳ್ಳಬೇಡಿ. ನಿಮ್ಮ ಅವತಾರದ ಕೊನೆಯಲ್ಲಿ ವಿಮಾನವು ಬರುತ್ತದೆ, ಅದರಲ್ಲಿ ಕುಳಿತುಕೊಂಡು ಜೀವನ್ಮುಕ್ತರಾಗಿ ಬನ್ನಿ ಆ ಸಮಯದಲ್ಲಿ ನಿಮಗೆ ನನ್ನ ದರ್ಶನ ಆಗುತ್ತದೆ.”

ಈ ಧ್ವನಿಯನ್ನು ಕೇಳಿದ ಅವರು ತಮ್ಮ ವ್ರತವನ್ನುಮುಗಿಸಿ ಹಿಂದಿರುಗಿದರು. ಮಥುರಾ ವೃಂದಾವನಕ್ಕೆ ತೆರಳಿ ಶ್ರೀಕೃಷ್ಣನ ದರ್ಶನ ಪಡೆದರು. ನಂತರ ಅವರು ದಕ್ಷಿಣಕ್ಕೆ ಹೋಗಿ ಪಂಢರಪುರದ ವಿಠ್ಠಲ ದರ್ಶನ ಪಡೆದರು. ಅಲ್ಲಿಂದ ನೇರವಾಗಿ ಗೋಮಾಂತಕಕ್ಕೆ ಬಂದರು. ಕಾಣಕೋಣ ತಾಲೂಕಿನಲ್ಲಿನ ಪರಶುರಾಮ ಮೂರ್ತಿಯ ದರ್ಶನ ಪಡೆದು ಅಂಕೋಲೆ ಮಾರ್ಗವಾಗಿ ಗೋಕರ್ಣ ಕ್ಷೇತ್ರಕ್ಕೆ ತೆರಳಿದರು.
ಅವರು ಗೋಕರ್ಣದ ಕೋಟಿತೀರ್ಥದ ಬಳಿ ಶಾಖಾಮಠವನ್ನು ನಿರ್ಮಿಸಿದರು ಮತ್ತು ಗಂಡಕಿಯ ಶಿಲಾನದಿಯಲ್ಲಿ ದೊರೆತ ಮೂರು ಪ್ರತಿಮೆಗಳಲ್ಲಿ ಒಂದಾದ ಭೂವಿಜಯ ವಿಟ್ಠಲಮೂರ್ತಿಯನ್ನು ಸ್ಥಾಪಿಸಿದರು. ಬಸ್ರೂರಿನಲ್ಲಿ ಇದೇ ರೀತಿಯ ಇನ್ನೊಂದು ಶಾಖಾಮಠವನ್ನು ನಿರ್ಮಿಸಿ ಅಲ್ಲಿ ದಿಗ್ವಿಜಯ ವಿಠ್ಠಲನ ಮೂರ್ತಿಯನ್ನು ಪ್ರತಿಷ್ಠಾಪಿಸಿ ವೀರ ವಿಠ್ಠಲನ ವಿಗ್ರಹವನ್ನು ತಮ್ಮ ನಿತ್ಯಆರಾಧನೆಗೆ ಇಟ್ಟುಕೊಂಡು ಈ ವಿಗ್ರಹವನ್ನು ತಾವೇ ಪೂಜಿಸಲು ಆರಂಭಿಸಿದರು. ಅಂದಿನಿಂದ ಪೀಠಾಧಿಪತಿಗಳು ಈ ಇಷ್ಟ ದೇವರನ್ನೇ ಪೂಜಿಸುವುದು ವಾಡಿಕೆಯಾಯಿತು. ಈ ವಿಗ್ರಹವನ್ನು ಬೇರೆ ಯಾರೂ ಮುಟ್ಟುವಂತಿಲ್ಲ. ತೀವ್ರ ಅಸ್ವಸ್ಥರಾಗಿದ್ದರೂ ಕೂಡ ಸ್ನಾನಮಾಡಿ ಮೂರ್ತಿಗೆ ತಾವೇ ಪೂಜೆ ಸಲ್ಲಿಸಬೇಕು. ಈ ಪದ್ಧತಿ ಇಂದಿಗೂ ಚಾಲ್ತಿಯಲ್ಲಿದೆ.
ಭಟ್ಕಳ ಮಠಕ್ಕೆ ಹಿಂತಿರುಗಿದ ಕೆಲವು ದಿನಗಳ ನಂತರ ಬ್ರಹ್ಮಚಾರಿಯೊಬ್ಬನಿಗೆ ಶಿಷ್ಯಾಶ್ರಮವನ್ನು ನೀಡಿ ಶ್ರೀಪುರುಷೋತ್ತಮ ತೀರ್ಥರೆಂದು ನಾಮಕರಣ ಮಾಡಿದರು ಮತ್ತು ವೀರವಿಟ್ಠಲ ಮೂರ್ತಿಯ ಪೂಜೆಯ ಜವಾಬ್ದಾರಿಯನ್ನು ಅವರಿಗೆ ವಹಿಸಿ ಪುನಃ ತೀರ್ಥ ಯಾತ್ರೆಗೆ ಹೊರಟರು. ಮೊದಲು ತಿರುಪತಿಗೆ ಹೋಗಿ ಅಲ್ಲಿ ವೆಂಕಟೇಶ ದೇವರ ದರ್ಶನ ಪಡೆದು ಶ್ರೀಶೈಲಕ್ಕೆ ಹೋದರು. ನಂತರ ಕಂಚಿಯಲ್ಲಿ ವರದರಾಜನ ದರ್ಶನ ಪಡೆದು ರಾಮೇಶ್ವರಕ್ಕೆ ತೆರಳಿ ಉಡುಪಿ ಮಾರ್ಗವಾಗಿ ಭಟ್ಕಳಕ್ಕೆ ಮರಳಿದರು. ಉಡುಪಿಯಲ್ಲಿ ಶ್ರೀಮಧ್ವಾಚಾರ್ಯರು ಪ್ರತಿಷ್ಠಾಪಿಸಿದ ಶ್ರೀಕೃಷ್ಣನ ವಿಗ್ರಹದ ದರ್ಶನ ಪಡೆಯುವದು ಅವರ ಉದ್ದೇಶವಾಗಿತ್ತು.
ಭಟ್ಕಳ ಮಠಕ್ಕೆ ಮರಳಿದ ಮೇಲೂ ಮಠದ ಅಧಿಕಾರ ವಹಿಸಿಕೊಳ್ಳಲಿಲ್ಲ. ಮಠದ ಹೊರಗೆ ಸ್ಥಾಪಿಸಿದ ವಿಟ್ಠಲನ ಪೂಜೆಯನ್ನು ಮಾಡುತ್ತ ಕಾಲಕಳೆಯುತ್ತಿದ್ದರು. ಅವರು ಪೂಜೆ ಮಾಡುತ್ತಿದ್ದಾಗ ವೈಕುಂಠದಿಂದ ವಿಮಾನವು ಅವರನ್ನು ಕರೆದೊಯ್ಯಲು ಬಂದಿತು ಎಂದು ಗುರು ಪರಂಪರೆಯಲ್ಲಿ ಹೇಳಲಾಗಿದೆ. ವಿಮಾನ ಬಂದಿದೆ ಎಂದು ತಿಳಿದ ಅವರು ಸಮಾಧಿಸ್ಥಿತಿಗೆ ಹೋಗಿ ಪಾರ್ಥಿವ ಶರೀರವನ್ನು ತ್ಯಜಿಸಿದರು. ಅವರ ಆತ್ಮವು ವಿಮಾನದಲ್ಲಿ ವೈಕುಂಠಕ್ಕೆ ಹಾರಿಹೋಯಿತು.
ಇನ್ನೂ ದೊಡ್ಡ ಪವಾಡವನ್ನು ಗುರುಪರಂಪರಾಮೃತದಲ್ಲಿ ವಿವರಿಸಲಾಗಿದೆ. ಜೀವೋತ್ತಮತೀರ್ಥರ ಆತ್ಮವು ವಿಮಾನದ ಮೂಲಕ ಹೋಗುತ್ತಿದ್ದಾಗ, ಉಡುಪಿಯಲ್ಲಿ ಶ್ರೀ ವಾದಿರಾಜ ತೀರ್ಥರು ಶ್ರೀಕೃಷ್ಣನ ವಿಗ್ರಹಕ್ಕೆ ಆರತಿಯನ್ನು ಮಾಡುತ್ತಿದ್ದರು. ಅವರ ಕಿವಿಗಳಿಗೆ ಆಕಾಶದಿಂದ ದುಂದುಭಿಯ ಶಬ್ದವು ಕೇಳಿ ಬಂದಿತು. ಅವರಿಗೆ ಶ್ರೀ ಜೀವೋತ್ತಮ ತೀರ್ಥರು ವೈಕುಂಠಕ್ಕೆ ಪಯಣಿಸುತ್ತಿರುವದು ಅವರ ಅಂತಃಪ್ರಜ್ಞೆಗೆ ಅರಿವಾಯಿತು. ಕೈಯಲ್ಲಿದ್ದ ಆರತಿಯನ್ನು ಆಕಾಶದೆಡೆಗೆ ಓವಾಳಿಸಿದರು. ಇದನ್ನು ನೋಡಿ ಹತ್ತಿರದ ಜನರು ಆಶ್ಚರ್ಯಚಕಿತರಾದರು. ಅದರ ಬಗ್ಗೆ ಕೇಳಿದಾಗ ಶ್ರೀಜೀವೋತ್ತಮ ತೀರ್ಥರ ಗುಣಗಾನಗಳನ್ನು ಮಾಡಿ ಅವರು ನಿಜಧಾಮಕ್ಕೆ ಹೋಗುತ್ತಿರುವ ವಿಷಯವನ್ನು ತಿಳಿಸಿದರು.
ಜೀವೋತ್ತಮತೀರ್ಥರು ಬಹಳ ಕಾಲ ಅಂದರೆ ಶಕೆ ೧೪೩೯ ರಿಂದ ೧೫೧೦ ರವರೆಗೆ ಸುಮಾರು ೭೦ ವರ್ಷಗಳ ವರೆಗೆ ಮಠದ ಕಾರ್ಯಭಾರವನ್ನು ನೋಡಿಕೊಂಡರು. ಶಕೆ ೧೫೧೦ ಭಾದ್ರಪದ ಶುಕ್ಲ ಪಂಚಮಿಯಂದು ಭಟ್ಕಳದಲ್ಲಿ ಮೋಕ್ಷಾರೂಢರಾದರು. ಭಟ್ಕಳದ ಗೋಪಿ ನದಿಯ ದಡದಲ್ಲಿ ಅವರ ವೃಂದಾವನವಿದೆ.