ಶ್ರೀ ಆನಂದತೀರ್ಥರು
ಜನ್ಮಸ್ಥಳ : ಅವರ್ಸಾ (ಅಂಕೋಲಾ)
ಸಂನ್ಯಾಸ ದೀಕ್ಷೆ : ಶ್ರೀ ಶಕೆ ೧೭೨೭ ಕ್ರೋಧನ ಸಂವತ್ಸರ ಚೈತ್ರ ಶುಕ್ಲ-೧೩ ಗುರುವಾರ (೧೧-೦೪-೧೮೦೫)
ದೀಕ್ಷಾ ಸ್ಥಳ : ಪರ್ತಗಾಳಿ ಮಠ
ದೀಕ್ಷಾಗುರು : ಶ್ರೀ ಲಕ್ಷ್ಮೀನಾಥ ತೀರ್ಥರು (೧೬)
ಗುರುಪೀಠಾರೋಹಣ : ಶ್ರೀ ಶಕೆ ೧೭೪೩ ವೃಷಭ ಸಂವತ್ಸರ ಮಾಘ ಕೃಷ್ಣ-೧೪ ಬುಧವಾರ (೨೦-೦೨-೧೮೨೨)
ಶಿಷ್ಯಸ್ವೀಕಾರ : ಶ್ರೀ ಪೂರ್ಣಪ್ರಜ್ಞತೀರ್ಥರು (೧೮)
ಮಹಾನಿರ್ವಾಣ : ಶ್ರೀ ಶಕೆ ೧೭೫೦ ಸರ್ವಧಾರಿ ಸಂವತ್ಸರ ಶ್ರಾವಣ ಶುಕ್ಲ-೯ ಭಾನುವಾರ (೧೯-೦೮-೧೮೨೮)
ವೃಂದಾವನ ಸ್ಥಳ : ಪರ್ತಗಾಳಿ ಮಠ
ಶಿಷ್ಯ ಕಾಲಾವಧಿ : ೧೬ ವರ್ಷ ೧೦ ತಿಂಗಳು ೦೯ ದಿನಗಳು
ಗುರುಪೀಠ ಕಾಲಾವಧಿ : ೦೬ ವರ್ಷ ೦೬ ತಿಂಗಳು
ಮಠಸೇವಾ ಕಾಲಾವಧಿ : ೨೩ ವರ್ಷ ೧೦ ತಿಂಗಳು ೦೯ ದಿನಗಳು
ಮಠ ಸ್ಥಾಪನೆ : ಶ್ರೀ ವೀರವಿಟ್ಠಲ ಮಠ ಬಾಳ್ಳಿ
ವಿಶೇಷ ಕಾರ್ಯ : ಪರ್ತಗಾಳಿ ಮಠದ ವಿಸ್ತಾರಣೆಯೊಂದಿಗೆ ಜೀರ್ಣೋದ್ಧಾರ, ಪರ್ತಗಾಳಿಯಲ್ಲಿ ಹೊಸ
ಮಾರುತಿಘೂಡ ಸ್ಥಾಪನೆ, ಬದರಿನಾಥ ಯಾತ್ರೆ.
ಸ್ವಾಮೀಜಿಯ ಇತಿಹಾಸ
ಆನಂದತೀರ್ಥಮೌನೀನ್ದ್ರಂ ಸದಾನಂದ ಪಯೋನಿಧಿಮ್ ।
ಪ್ರವನ್ದೇ ದೀನಮಂದಾರಂ ಸದಾನಂದಾಪ್ತಯೆ ಸದಾ ॥
ಶ್ರೀ ಆನಂದ ತೀರ್ಥರು ಮಠಕ್ಕೆ ಆರ್ಥಿಕ ಸ್ಥಿರತೆ ನೀಡಿದರು ಅಂದರೆ ವ್ಯಾವಹಾರಿಕ ದೃಷ್ಟಿಯುಳ್ಳವರು, ಆದರೆ
ವ್ಯಾವಹಾರಿಕ ಪಾಶದಲ್ಲಿ ಅವರು ಸಿಲುಕಿಕೊಳ್ಳಲಿಲ್ಲ. ಅವರು ಅತ್ಯಂತ ವಿರಕ್ತರೆಂದೇ ಖ್ಯಾತರಾಗಿದ್ದರು. ಅವರು
ಸಂಸ್ಥಾನವನ್ನು ನಡೆಸುತ್ತಿದ್ದರು, ಅವರು ಮಠದ ವ್ಯವಹಾರವನ್ನು ನಿರ್ವಹಿಸುತ್ತಿದ್ದರೂ ಸ್ವತಃದ ಪಾರಮಾರ್ಥಿಕ
ಉನ್ನತಿಯಬಗ್ಗೆ ಅನಾದರ ಮಾಡಲಿಲ್ಲ.
ಶ್ರೀ ಆನಂದ ತೀರ್ಥರು ನಿರ್ವಹಿಸಿದ ಲೌಕಿಕ ಕಾರ್ಯಗಳಲ್ಲಿ ಗಮನಸೆಳೆಯುವ ಕಾರ್ಯವೆಂದರೆ ಪರ್ತಗಾಳಿ ಮಠದ
ಜೀರ್ಣೋದ್ಧಾರ. ಶ್ರೀ ಶಕೆ ೧೭೩೧ ಶುಕ್ಲ ಸಂವತ್ಸರ ವೈಶಾಖ ವದ್ಯ-೭ (೦೬-೦೫-೧೮೦೯) ರಂದು ಪ್ರಾರಂಭಿಸಿ ಶ್ರೀಶಕೆ
೧೭೩೨ ಪ್ರಮೋದ ಸಂವತ್ಸರ ಜ್ಯೇಷ್ಠ ಶುಕ್ಲ-೮ (೧೦-೦೬-೧೮೧೦) ರಂದು ಪುನಃರ್ಪತಿಷ್ಠಾ ಕಾರ್ಯವನ್ನು ನೆರವೇರಿಸಿದರು.
ಕ್ರಿ.ಶ. ೧೮೨೮ ಶ್ರಾವಣ ಶುಕ್ಲ ನವಮಿ (ಕ್ರಿ.ಶ. ೧೮೧೦). ಮಠದ ಪ್ರಾಂಗಣದಲ್ಲಿ ಮಾರುತಿಗೆ (ಕ್ರಿ.ಶ. ೧೮೧೧) ಎತ್ತರದ
ಮಾರುತಿ ಮಂದಿರವನ್ನು(ಮಾರುತಿಘೂಡ) ಸ್ಥಾಪಿಸಿದರು. ಪೈಂಗಿಣಿ ಗ್ರಾಮದಲ್ಲಿ ಪರಶುರಾಮ ದೇವಾಲಯವನ್ನು
ನಿರ್ಮಿಸಲು ದೇವಾಲಯದ ಮಹಾಜನ ಮಂಡಳಿಗೆ ಸಹಾಯ ಮಾಡಿದರು. ಬೇತಾಳ ದೇವಸ್ಥಾನದಲ್ಲಿ ಉತ್ಸವದ
ಸಮಯದಲ್ಲಿ ಒಂದು ಬಟ್ಟೆಯ 'ಟಕಾ' ಓದುವದಿದ್ದು ಇದನ್ನು ಸ್ವಾಮೀಜಿಯವರು ಕ್ರಿ.ಶ. ೧೮೨೩ರಲ್ಲಿ ಬರೆದುಕೊಟ್ಟರು.
ಶ್ರೀ ಆನಂದತೀರ್ಥರು ಶಿಷ್ಯರಾಗಿದ್ದಾಗ ಶಕೆ ೧೭೩೧ರಲ್ಲಿ ಉತ್ತರದ ಬರೋಡಾದಿಂದ ಗೋಕರ್ಣ ಮಠಕ್ಕೆ
ಹಿಂತಿರುಗುತ್ತಿದ್ದಾಗ ಗಾಯಕ್ವಾಡ್ ಸರ್ಕಾರವು ಅವರಿಗೆ ರಹದಾರಿ ಪತ್ರವನ್ನು ನೀಡಿದ್ದು ಅದರಲ್ಲಿ ೬೦ ಬ್ರಾಹ್ಮಣರು, ೩೦
ಸಿಪಾಯಿಗಳು, ೨ ಒಂಟೆ ಸವಾರರು, ೧೬ ಕುದುರೆ ಸವಾರರು, ೨ ಎತ್ತಿನ ಬಂಡಿ ಮತ್ತು ಪಲ್ಲಕ್ಕಿಯೊಂದಿಗೆ ಸಂಚರಿಸಲು
ಅನುಮತಿ ನೀಡಲಾಗಿತ್ತು. ಮತ್ತೊಂದು ರಹದಾರಿ ಪತ್ರದಲ್ಲಿ ಗೋಕರ್ಣದ ಶ್ರೀ ಆನಂದತೀರ್ಥ ಸ್ವಾಮಿಗಳು ೧೦೦ ಮಂದಿ,
ಪಲ್ಲಕ್ಕಿ, ೧೦ ಕುದುರೆಗಳು ಮತ್ತು ಆನೆಯೊಂದಿಗೆ ತೀರ್ಥಯಾತ್ರೆಗೆ ತೆರಳುತ್ತಿದ್ದು ಅವರಿಗೆ ಅವರೋಧಿಸಬಾರದು ಎಂದು
ಆದೇಶಿಸಲಾಗಿತ್ತು. ೧೭೩೯ ಮತ್ತು ೧೭೪೧ ರಲ್ಲಿ ಅಂತಹ ಎರಡು ಆದೇಶಗಳನ್ನು ನೀಡಲಾಗಿದೆ ಎಂದು ದಾಖಲೆಗಳಲ್ಲಿ
ಉಲ್ಲೇಖಿಸಲಾಗಿದೆ.
ಶ್ರೀ ಆನಂದತೀರ್ಥರು ತಮ್ಮ ಕಾಲ ಕೀರ್ದಿಯಲ್ಲಿ ಅನೇಕ ತೀರ್ಥಯಾತ್ರೆಗಳನ್ನು ಮಾಡಿದ್ದಾರೆ. ಶಕೆ ೧೭೩೩ (ಕ್ರಿ.ಶ.
೧೮೧೧)ರ ಪ್ರಜಾಪತಿ ಸಂವತ್ಸರದಲ್ಲಿ ದಕ್ಷಿಣದ ರಾಮೇಶ್ವರ ಕ್ಷೇತ್ರಕ್ಕೆ ಪ್ರವಾಸ ಮಾಡಿ ಅನಂತಶಯನ, ತೋತಾದ್ರಿ,
ಕುಂಭಕೋಣಂ, ಶ್ರೀರಂಗಂ, ವಿಷ್ಣುಕಾಂಚಿ ಮೊದಲಾದ ಸ್ಥಳಗಳನ್ನು ಸಂದರ್ಶಿಸಿದ್ದಾರೆ. ಶಕೆ ೧೭೩೯ ಈಶ್ವರ ಸಂವತ್ಸರ
(ಕ್ರಿ.ಶ. ೧೮೧೭) ಅವರು ಹಿಮಾಲಯದ ಬದರಿನಾಥಕ್ಕೆ ಭೇಟಿ ನೀಡಲು ನಿರ್ಧರಿಸಿದರು ಮತ್ತು ಉತ್ತರ ಭಾರತದ ಯಾತ್ರಾ
ಸ್ಥಳಗಳಿಗೆ ಭೇಟಿ ನೀಡಲು ಯೋಜಿಸಿದರು. ಆ ವರ್ಷದಲ್ಲಿ ಶ್ರೀ ಆನಂದತೀರ್ಥರು ವಾರಣಾಸಿಯಲ್ಲಿರುವ ಸ್ವಮಠದಲ್ಲಿ
ಚಾತುರ್ಮಾಸ ವ್ರತಾಚರಣೆಯನ್ನು ನೆರವೇರಿಸಿ ಬದರಿನಾಥಕ್ಕೆ ತೆರಳಿದರು. ದಾರಿಯುದ್ದಕ್ಕೂ ಉತ್ತರ ಭಾರತದ
ದೇಗುಲಗಳಿಗೆ ಭೇಟಿ ನೀಡಿದರು. ಬದರಿನಾಥದಿಂದ ಹಿಂದಿರುಗುವಾಗ, ಅವರು ಕ್ರಿ.ಶಕ ೧೭೪೦ ರಲ್ಲಿ ವಾರಣಾಸಿಗೆ ಮರಳಿದರು
ಅಲ್ಲಿ ಚಾತುರ್ಮಾಸ ವ್ರತಾಚರಣೆ ಮಾಡಿದರು. ಅಲ್ಲಿಂದ ಗೋವಾಕ್ಕೆ ಹಿಂದಿರುಗುವಾಗ ಕ್ರಿ.ಶ. ೧೮೧೮ರಲ್ಲಿ ಮಾರ್ಶೆಲದಲ್ಲಿ
ಚಾತುರ್ಮಾಸ ವ್ರತಾಚರಣೆ ಮಾಡಿದರು. ಹೀಗೆ ಬದರಿನಾಥ ತೀರ್ಥಯಾತ್ರೆಯ ಸಮಯದಲ್ಲಿ ಸತತ ಮೂರು
ಚಾತುರ್ಮಾಸಗಳನ್ನು ಮಾಡಿದರು. ಇದರಿಂದ ಈ ತೀರ್ಥಯಾತ್ರೆಗಳು ಎಷ್ಟು ಕಠಿಣವಾಗಿದ್ದವು ಎಂಬುದನ್ನು ನಾವು
ಉಹಿಸಬಹುದು.
ಶ್ರೀ ಆನಂದತೀರ್ಥರ ಕಾಲಕಿರ್ದಿಯ ಕೆಲವು ಮುಖ್ಯಾಂಶಗಳು:
ಶ್ರೀ ಆನಂದ ತೀರ್ಥ ಸ್ವಾಮಿಗಳು ಶಕೆ ೧೭೪೬ ಜ್ಯೇಷ್ಠ ಶು-೭ಯಂದು ಕಾಶಿಯ ಪಂಚಗಂಗಾ ಘಾಟ್‌ನಲ್ಲಿ ಮಠಾರ್ಚಕ
ಅನಂತ ಭಟ್ಟ ಉಜೆ ಅವರಿಗೆ ಮಾರ್ಸೆಲನಿಂದ ರಾಯಸಪತ್ರವನ್ನು ಬರೆದಿದ್ದು ಅದರಲ್ಲಿ “ನಾವು ನಿಮಗೆ ಪ್ರತಿ ವರ್ಷ ೫೦
ರೂ.ಗಳನ್ನು ಕಳುಹಿಸುತ್ತೇವೆ. ಈ ಮೊತ್ತದಿಂದ ಅಲ್ಲದೆ ಮಠಕ್ಕೆ ಬರುವ ಆದಾಯದಿಂದ ಮಠದ ಖರ್ಚುವೆಚ್ಚಗಳನ್ನು
ನೋಡಿಕೊಂಡು ಮಠ ನಿತ್ಯಪೂಜಾ ಅರ್ಚನೆಯನ್ನು ಮಾಡಿಕೊಂಡುಬರುವದು. ನಮಗೆ ೫೦ಕಿಂತ ಹೆಚ್ಚಿನ ಹಣವನ್ನು
ಕೊಡಬೇಕೆಂಬ ಮನಸ್ಸಿದ್ದರೂ ಇಂದಿನದಿನಗಳಲ್ಲಿ ಮಠದ ಖರ್ಚುವೆಚ್ಚಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ
ಕೊನೆಯ ವಾಕ್ಯದಿಂದ ಅವರು ಹೆಚ್ಚಿನ ಹಣರವಾನಿಸಲು ಸಾಧ್ಯವಾಗುವದಿಲ್ಲ ಎಂದು ಸೂಚಿಸಲು ಬಯಸಿದ್ದಾರೆ.
ಶಕೆ ೧೭೪೭ರ ಪಾಲ್ಗುಣ ಕೃಷ್ಣ-೩ ರಂದು ಫೊಂಡಾ ಮಹಲಿನ ಸೋಂದೆಕರ ರಾಜಮನೆತನದ ರಾಜೇ ಬಸವಲಿಂಗ
ಮಹಾರಾಜ ಮತ್ತು ಅವರ ಯುವರಾಜ ಸದಾಶಿವ ಮಹಾರಾಜರು ಪರ್ತಗಾಳಿ ಮಠಕ್ಕೆ ಭೇಟಿ ನೀಡಿದರು ಎಂದು ಮಠ
ಕೀರ್ದಿಯಲ್ಲಿ ನೋಂದುಮಾಡಲಾಗಿದೆ. ಸೋಂದೇಕರ ರಾಜವಂಶಸ್ಥರು ಆ ಕಾಲದಲ್ಲಿ ಬಾಂದೋಡೆಯಲ್ಲಿ
ವಾಸವಾಗಿದ್ದರು. ಹೈದರ್ ಅಲಿಯ ಆಕ್ರಮಣದಿಂದಾಗಿ, ಈ ರಾಜವಂಶಗಳು ಕ್ರಿ.ಶ. ೧೭೧೩ರ ಸುಮಾರಿಗೆ ಅಲ್ಲಿಗೆ ಬಂದು
ನೆಲೆಸಿದ್ದರು. ಸುಮಾರು ಐದು ದಿನಗಳ ಪರ್ಯಂತ ಇರ್ವರೂ ಪರ್ತಗಾಳಿ ಮಠದಲ್ಲಿ ವಾಸ್ತವ್ಯ ಮಾಡಿದ್ದರು.
ಶಕೆ ೧೭೪೭ರ ಫಾಲ್ಗುಣ ಶುಕ್ಲ-೬ರಂದು ಸಂಚಾರದಲ್ಲಿರುವಾಗ ಅವರು ತಮ್ಮ ಶಿಷ್ಯ ಶ್ರೀ ಪೂರ್ಣಪ್ರಜ್ಞ ತೀರ್ಥರಿಗೆ
ಒಂದು ಪತ್ರವನ್ನು ರವಾನಿಸಿದ್ದು ಅದರಿಂದ ಅವರು ತಮ್ಮ ಶಿಷ್ಯನ ಅಧ್ಯಯನದ ಬಗ್ಗೆ ಎಷ್ಟು ಕಾಳಜಿವಹಿಸುತ್ತಿದ್ದರು
ಎಂಬ ಕಲ್ಪನೆಯನ್ನು ನೀಡುತ್ತದೆ. ಆ ಪತ್ರದಲ್ಲಿ ಅವರು ಹೀಗೆ ಸೂಚಿಸುತ್ತಾರೆ, " ನೀವು ಬೇರೆ ಕಾರ್ಯಗಳಿಗೆ ಹೆಚ್ಚಿನ ಗಮನ
ಕೊಡದೆ ಅಧ್ಯಯನದಲ್ಲಿ ನಿರತರಾಗಿರುವದು. ಪೂಜಾ ಅರ್ಚನಾದಿಗಳನ್ನು ಸಂಕೋಚ ಮಾಡಿ ಹಗಲು ರಾತ್ರಿ ಅಧ್ಯಯನ
ಮಾಡುತ್ತಿರುವದು."
ಗೋಮಾಂತಕದಲ್ಲಿ ಸಾರಸ್ವತ ಬ್ರಾಹ್ಮಣರ ವೈದಿಕ ಕಾರ್ಯಗಳು ಮತ್ತು ದೇವಾಲಯಗಳಲ್ಲಿನ ದೇವಪೂಜಾದಿ
ಅರ್ಚಕತ್ವಗಳು ದ್ರಾವಿಡ ಬ್ರಾಹ್ಮಣರ ಕಡೆಗೆ ಇದ್ದವು. ಏಕೆಂದರೆ ಸಾರಸ್ವತರಲ್ಲಿ ಬ್ರಾಹ್ಮಣರಿದ್ದರೂ ಅವರು ವೈದಿಕ
ವೃತ್ತಿಯನ್ನು ಮಾಡುತ್ತಿರಲಿಲ್ಲ. ಈ ಮೊದಲಿನ ಗುರುವರ್ಯರು ಸಾರಸ್ವತ ಬ್ರಾಹ್ಮಣರಲ್ಲಿ ಈ ಪೌರೋಹಿತ್ಯವನ್ನು
ನಡೆಸುವಂತೆ ಪ್ರಯತ್ನಿಸಿದ್ದಾರೆಂದು ತೋರುತ್ತದೆ. ಅವರಲ್ಲಿ ಶ್ರೀ ಆನಂದತೀರ್ಥರೂ ಒಬ್ಬರು. ಅವರು ೧೭೪೯ ರ ಆಷಾಢ
ವದ್ಯ-೨ ರಂದು ಮಾಲ್ವಣದ ಕೃಷ್ಣ ಲಾಡೆ ಪ್ರಭು ಮತ್ತು ವಿಠೋ ಪ್ರಭು ಜಾಂಟ್ಯೆ ಅವರಿಗೆ ಆಜ್ಞಾರಾಯಸ ಬರೆದು ಅದರಲ್ಲಿ
“ನಾವು ಸ್ವಜಾತಿಯ ಎರಡು ಪುರೋಹಿತರನ್ನು ಕಳುಹಿಸುತ್ತಿದ್ದೇವೆ. ಅವರಿಂದ ಸರಿಯಾಗಿ ಹವ್ಯಕ್ಯಾದಿಗಳನ್ನು
ನಡೆಸಿಕೊಳ್ಳುವದು. ಏಕೆಂದರೆ ಆ ಪ್ರಾಂತಗಳಲ್ಲಿ ನಮ್ಮ ಗ್ರಹಸ್ತರು ವಾಸಿಸುತ್ತಿದ್ದಾರೆ. ಅಲ್ಲಿಯ ಪುರೋಹಿತ ವರ್ಗವು
ನಮ್ಮ ಜನರ ಹವ್ಯಕ್ಯಾದಿ ಕರ್ಮಗಳನ್ನು ಮಾಡುವಾಗ ತಾರತಮ್ಯ ಮಾಡುತ್ತಾರೆ, ವೈದಿಕ ಕಾರ್ಯಗಳು ಸರಿಯಾಗಿ
ಮಾಡುವದಿಲ್ಲ ಎಂದು ನಮ್ಮ ಅರಿವಿಗೆ ಬಂದಿದೆ.
ಇಂತಹ ವಿರಕ್ತ, ವ್ಯವಹಾರ ನಿಪುಣ, ಕರ್ತವ್ಯ ಪರಾಯಣರೂ ಆಗಿದ್ದ ಯತಿವರ್ಯರು ಶಕೆ ೧೭೫೦ ಸರ್ವಧಾರಿ
ಸಂವತ್ಸರದ ಶ್ರಾವಣ ಶುಕ್ಲ-೯ ರಂದು ಪರ್ತಗಾಳಿ ಮಠದಲ್ಲಿ ಮೋಕ್ಷಾರೂಢರಾದರು.