Taking too long? Close loading screen.

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

9 Mangaluru Math Kannada

ಶ್ರೀ ಗೋಕರ್ಣ ಮಠ ಮಂಗಳೂರು


ಸಂಸ್ಥಾಪಕ : ಶ್ರೀ ರಾಮಚಂದ್ರತೀರ್ಥರು (೬)
ಸ್ಥಾಪನಾ ವರ್ಷ : ಶಕ ೧೫೮೨ ಶಾರ್ವರಿ (ಕ್ರಿ.ಶ. ೧೬೬೦)
ಸ್ಥಳಾಂತರ : ಶ್ರೀ ರಮಾಕಾಂತ ತೀರ್ಥ (೧೧) ಅಸ್ತಿತ್ವದಲ್ಲಿರುವ ರಥಬೀದಿಯ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಹಳೆಯ ಮಠ.
ನವೀಕರಣ : ಶ್ರೀ ಪೂರ್ಣಪ್ರಜ್ಞ ತೀರ್ಥ (೧೮) ಶಕ ೧೭೬೪ ಶುಭಕೃತ ಫಾಲ್ಗುಣ ಶುಕ್ಲ ದಶಮಿ ಶನಿವಾರ (೧೧-೦೩-೧೮೪೩)
ಶ್ರೀ ವೀರವಿಟ್ಠಲ ಪುನಃ ಪ್ರತಿಷ್ಠಾ, ಸುವರ್ಣ ಶಿಖರ ಕಲಶ ಪ್ರತಿಷ್ಠೆ
ದೇವ ಪ್ರತಿಮೆ : ಶ್ರೀ ವೀರವಿಟ್ಠಲ (ಪಂಚಲೋಹದ ಪ್ರತಿಮೆ)
ಇತರೆ ದೇವ ಪ್ರತಿಷ್ಠಾ : ನವಗ್ರಹ (ಶಿಲಾವಿಗ್ರಹ) ಶ್ರೀ ವಿದ್ಯಾಧಿರಾಜ ತೀರ್ಥ
ವಿಳಾಸ : ಶ್ರೀ ಗೋಕರ್ಣ ಮಠ, ರಥ ಬೀದಿ, ಮಂಗಳೂರು (ದ.ಕ.) ೫೭೫೦೦೧, ದೂರವಾಣಿ: ೦೮೨೪-೨೪೨೪೨೧೦
ಕಟ್ಟಡದ ವಿಸ್ಥಿರ್ಣ : ೨೫೨೦ ಚದರ ಮೀಟರ
ಕಟ್ಟಡದ ವಿವರಗಳು : ಗರ್ಭಗ್ರಹ, ಅಗ್ರಶಾಲಾ, ಅರ್ಚಕ ನಿವಾಸ, ಸಭಾಗ್ರಹ, ಗುರುಭವನ, ಕಲ್ಯಾಣ ಮಂಟಪ
ಶಿಖರ ಕಲಶ : ಸ್ವರ್ಣ ಲೇಪಿತ ಶಿಖರ ಕಲಶ
ಸಮಾಜ ಸೇವೆ : ಶ್ರೀ ಪೂರ್ಣಪ್ರಜ್ಞ ವಸತಿ ನಿಲಯ (ವೃದ್ಧಾಶ್ರಮ)
ಸಭಾಭವನ : ಶ್ರೀ ದ್ವಾರಕಾನಾಥ ಭವನ, ಶ್ರೀ ಪೂರ್ಣಪ್ರಜ್ಞ ಸಭಾಭವನ
ಪಂಚ ಪರ್ವ ಉತ್ಸವ : ವರ್ಧಂತಿ ಉತ್ಸವ, ಅನಂತ ಚತುರ್ದಶಿ, ಶ್ರೀ ದ್ವಾರಕಾನಾಥ ಪೂಣ್ಯ ತಿಥಿ

ಮಂಗಳೂರಿನಲ್ಲಿ ಗೋಕರ್ಣಮಠದ ಸ್ಥಾಪನೆಯ ಒಂದು ಅವಲೋಕನ.

ಶ್ರೀ ವಿಷ್ಣುವಿನ ಅವತಾರವಾದ ಪರುಶುರಾಮನಿಂದ ಯಜ್ಞಯಾಗಾದಿಗಳಿಗಾಗಿ ಸರಸ್ವತೀನದಿತೀರದಿಂದ ಕರೆತರಲ್ಪಟ್ಟ ದಶಗೋತ್ರಿ ಬ್ರಾಹ್ಮಣರು ಗೋಮಾಂತಕದಲ್ಲಿ ನೆಲೆಸಿದ್ದು ಕಾಲಕ್ರಮದಲ್ಲಿ ಪೋರ್ಚುಗೀಸರ ದಬ್ಬಾಳಿಕೆ, ಮತಾಂತರಗಳಿಂದ ಜಿಗುಪ್ಸೆಗೊಂಡು ೧೫ನೇ ಶತಮಾನದಲ್ಲಿ ಜನರು ತಂಡೋಪತಂಡವಾಗಿ ಪಶ್ಚಿಮ ಕರಾವಳಿಗುಂಟ ಗೋಮಾಂತಕದ ದಕ್ಷಿಣೋತ್ತರ ದಿಕ್ಕುಗಳಲ್ಲಿ ವಲಸೆಹೋದರು. ಹೀಗೆ ವಲಸೆಬಂದ ಕೆಲಕುಟುಂಬಗಳು ಇಂದಿನ ಮಂಗಳೂರು, ಬಸ್ರೂರ ಭಾಗಗಳಲ್ಲಿ ನೆಲೆಸಿದವು. ತಮ್ಮ ಸಾರವಂತಿಕೆ, ವಿದ್ಯೆ, ಪರಿಸರದ ಜನರೊಂದಿಗೆ ಹೊಂದಿಕೊಳ್ಳುವ ಗುಣಗಳಿಂದಾಗಿ ತಮ್ಮ ವಾಸಸ್ಥಾನಗಳಲ್ಲಿ ಗೌಡ ಸಾರಸ್ವತ ಸಮಾಜದವರು ಪ್ರೀತ್ಯಾದರಗಳಿಂದ ಗೌರವಪೂರ್ವಕ ಜೀವನ ನಡೆಸುತ್ತಿದ್ದರು. ಕೆಲ ಕುಟುಂಬಗಳು ಮಂಗಳೂರುನಗರ ಮತ್ತು ಅದರ ಪರಿಸರದಲ್ಲಿ ಸ್ಥಾಯಿಕರಾದರು. ಇವರ ಸರಳಜೀವನ, ದೇವರಲ್ಲಿನ ಭಕ್ತಿ, ಶೃದ್ಧೆ, ವ್ಯಾಪಾರ ವ್ಯವಹಾರಗಳಲ್ಲಿ ಚತುರತೆ, ಪರಿಣತೆ, ಅವರ ವಿದ್ಯಾ ವಿನಯ ಸಂಪನ್ನತೆ, ಪರಿಸರದ ಜನರಲ್ಲಿ ಹಾಸುಹೊಕ್ಕಾಗಿ ಸೇರುವ ಅವರ ಸಹಜವೃತ್ತಿಯಿಂದಾಗಿ ಕೆಲವು ಸಮಾಜವರ್ಗಗಳು ಅಸೂಯೆಯಿಂದ ಇವರನ್ನು ಸಮಾಜದಲ್ಲಿ ಅಗೌರವಪಡಿಸಲು ಯತ್ನಿಸುತ್ತಿದ್ದರು. ನಿಮಗೆ ಗುರುಪೀಠವಿಲ್ಲ. ಸಂಸ್ಕಾರವಿಧಿಗಳನ್ನು ಪೂರೈಸಲು ಯೋಗ್ಯ ಪಂಡಿತರಿಲ್ಲ, ನೀವು ಷಟ್ಕರ್ಮಿಗಳಲ್ಲ, ನೀವು ಮತ್ಸ್ಯಾಹಾರಿಗಳು ಇತ್ಯಾದಿಯಾಗಿ ಆಗಾಗ್ಗೆ ಗೌಡಸಾರಸ್ವತ ಸಮಾಜವನ್ನು ಟೀಕಿಸುತ್ತಿದ್ದರು. ಇದು ನಮ್ಮ ಸಮಾಜಕ್ಕೆ ಹೃದಯವೇದನೆಯುಂಟು ಮಾಡುತಿತ್ತು.
ಸುಮಾರು ೧೫ನೇ ಶತಮಾನದಿಂದ ನಡೆದುಬಂದ ಈ ಘಟನೆ ಜನರ ಮನಸ್ಸಿನಲ್ಲಿ ಯಾವಾಗಲೂ ದುಃಖ ಉಂಟುಮಾಡುತ್ತಿತ್ತು. ಆಕಾಲದಲ್ಲಿ ಮಂಗಳೂರು ಪರಿಸರದ ಮೂಲಿಕಾಪುರ (ಮುಲ್ಕಿ), ಕಾರ್ಕಳ ಮತ್ತು ಮಂಜೇಶ್ವರದಲ್ಲಿ ಮಾತ್ರ ಗೌಡಸಾರಸ್ವತರ ಸಣ್ಣ ದೇವಾಲಯಗಳು ಮಾತ್ರ ಇದ್ದವೇ ಹೊರತು ಗುರುಪೀಠದ ಸಂಕೇತವಾಗಿ ಶಾಖಾಮಠಗಳಿರಲಿಲ್ಲ. ಕ್ರಿ.ಶ. ೧೪೭೫ರಲ್ಲಿ ಶ್ರೀ ನಾರಾಯಣ ತೀರ್ಥರಿಂದ (೧೪೭೫-೧೫೧೭) ಮಾಧ್ವಸಂಪ್ರದಾಯದ ಪ್ರಥಮ ಗುರುಪೀಠವಾಗಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ವಾರಣಾಸಿ ಮತ್ತು ಭಟ್ಕಳದಲ್ಲಿ ಸ್ಥಾಪನೆಯಾಗಿತ್ತು. ಕ್ರಮೇಣವಾಗಿ ೧೫೪೫ರಲ್ಲಿ ಮಠ ಪರಂಪರೆಯ ೩ನೇ ಯತಿವರ್ಯ ಶ್ರೀ ಜೀವೋತ್ತಮ ತೀರ್ಥರಿಂದ (೧೫೩೭-೧೫೮೮) ತಮ್ಮ ಜನ್ಮಸ್ಥಳ ಬಸ್ರೂರಿನಲ್ಲಿ, ೧೫೫೦ರಲ್ಲಿ ಗೋಕರ್ಣದಲ್ಲಿ ಶಾಖಾಮಠಗಳು ಸ್ಥಾಪನೆಯಾದವು. ೫ನೇ ಯತಿವರ್ಯ ಶ್ರೀಅಣುಜೀವೋತ್ತಮ ತೀರ್ಥರು (೧೫೮೮-೧೬೩೭) ಗೋಮಾಂತಕದ ಡಿಚೋಲಿಯಲ್ಲಿ, ೬ನೇ ಯತಿವರ್ಯರಾದ ಶ್ರೀ ರಾಮಚಂದ್ರ ತೀರ್ಥರು(೧೬೩೭-೧೬೬೫) ಪರ್ತಗಾಳಿಯಲ್ಲಿ ಈಗಿನ ಕೇಂದ್ರಮಠವನ್ನು ಮತ್ತು ಋಷಿವನ (ರೀವಣ)ದಲ್ಲಿ ಶಾಖಾಮಠವನ್ನು ೧೬೫೬ರಲ್ಲಿ ಸ್ಥಾಪಿಸಿದರು.
ಕ್ರಿ.ಶ. ೧೬೬೦ರ ಸುಮಾರಿಗೆ ಶ್ರೀ ಗೋಕರ್ಣ ಮಠದ ೬ನೇ ಯತಿವರ್ಯ ಶ್ರೀ ರಾಮಚಂದ್ರ ತೀರ್ಥರು ದಕ್ಷಿಣಭಾರತ ಯಾತ್ರಾರ್ಥಿಯಾಗಿ ಸಂಚರಿಸುತ್ತಾ ಈಗಿನ ದಕ್ಷಿಣಕನ್ನಡ ಜಿಲ್ಲೆಯ ನೇತ್ರಾವತಿ ಮತ್ತು ಕುಮಾರಧಾರಾ ಸಂಗಮವಾದ ದಕ್ಷಿಣದ ಗಯಾಪಾದ ಕ್ಷೇತ್ರವೆಂದೆ ಪ್ರಸಿದ್ಧವಾದ ಉಪ್ಪಿನಂಗಡಿಯಲ್ಲಿ ಮುಕ್ಕಾಮ ಮಾಡಿದ್ದರು. ಈ ವಿಷಯವನ್ನು ಅರಿತ ಮಂಗಳೂರು ಪರಿಸರದ ಗೌಡ ಸಾರಸ್ವತ ಸಮಾಜದ ಸುಮಾರು ನೂರಕ್ಕೂ ಅಧಿಕ ಸಂಖ್ಯೆಯ ಸಮಾಜಬಾಂಧವರು ಸೇರಿ ಶ್ರೀ ರಾಮಚಂದ್ರ ತೀರ್ಥರಲ್ಲಿ ತಮ್ಮ ಮನದ ಅಳಲನ್ನು ತೋಡಿಕೊಂಡರು. ಇತರ ಬ್ರಾಹ್ಮಣಸಮಾಜ ತಮ್ಮನ್ನು ಅನಾದರ ಪಡಿಸುವದನ್ನು ನಿವೇದಿಸಿದರು. ಮಂಗಳೂರಿನಲ್ಲಿ ಒಂದು ಮಂದಿರವನ್ನು ಸ್ಥಾಪಿಸಿ ನಮಗೂ ಗುರುಪೀಠವಿದೆ. ನಾವೂ ಷಟ್ಕರ್ಮಿಗಳು. ಯಜ್ಞಯಾಗಾದಿ, ಉಪನಯನ ವಿವಾಹ ಇತ್ಯಾದಿ ಸಂಸ್ಕಾರ ನಡೆಸಲು ಗುರುಪೀಠದಲ್ಲಿ ಅಧ್ಯಯನಮಾಡಿದ ಸಮರ್ಥ ಪಂಡಿತರೂ ನಮ್ಮಲ್ಲಿ ಇದ್ದಾರೆ ಎಂಬುದನ್ನು ಇತರೇ ಸಮಾಜಕ್ಕೆ ತಿಳಿಯಪಡಿಸವರೇ ಒಂದು ಗುರುಪೀಠದ ಸಂಕೇತವಾಗಿ ಒಂದು ಮಂದಿರವನ್ನು ಸ್ಥಾಪಿಸಲು ವಿನಂತಿಸಿಕೊಂಡರು. ಕರುಣಾಳುಗಳಾದ ಶ್ರೀಗಳವರು ಅವರ ಆರ್ತನಾದದಿಂದ ಅವರಿಗುಂಟಾದ ದುಖವನ್ನು ಅರಿತು ಅವರನ್ನು ಸಾಂತ್ವನಗೊಳಿಸಿ ಅವರ ಮನದಿಚ್ಛೆಯಂತೆ ಶ್ರೀಶಕೆ ೧೫೮೨ ನೇ ಶಾರ್ವರಿ ಸಂವತ್ಸರದಲ್ಲಿ (ಕ್ರಿ.ಶ.೧೬೬೦ರಲ್ಲಿ) ಮಂಗಳೂರು ಶಹರದ ಮಧ್ಯವರ್ತಿ ಭಾಗದಲ್ಲಿ ಮಂದಿರವನ್ನು ಕಟ್ಟಿಸಿ ಶ್ರೀವಿಟ್ಠಲ ದೇವರ ಪಂಚಲೋಹದ ಮೂರ್ತಿಯನ್ನು ಸ್ಥಾಪಿಸಿದರು. ಇದು ಮಂಗಳೂರು ಶಹರದ ಪ್ರಪ್ರಥಮ ಗೌಡಸಾರಸ್ವತ ದೇವಾಲಯವಾಗಿದ್ದು ಸಮಾಜದ ಕೇಂದ್ರ ಸ್ಥಾನವಾಯಿತು.
ಗೋಕರ್ಣ ಮಠದ ಈ ಶಾಖೆ ಗೌಡಸಾರಸ್ವತ ಸಮಾಜದ ಕೇಂದ್ರವಾಗಿ ದಿನೇ ದಿನೇ ಅಭಿವೃದ್ಧಿಗೊಳ್ಳತೊಡಗಿತು. ದೇವಾಲಯದಲ್ಲಿ ಪಂಚಪರ್ವ ಉತ್ಸವಾದಿಗಳು, ತಪ್ತಮುದ್ರಾಧಾರಣೆಗಾಗಿ ಉಡುಪಿಯ ಅಷ್ಠಮಠಗಳಿಗೆ ಹೋಗುತ್ತಿದ್ದ ಸಮಾಜ ಬಾಂಧವರು ಗುರುಗಳ ಆಗಮನದಿಂದ ಈಗ ಮಂಗಳೂರು ಗೋಕರ್ಣಮಠಕ್ಕೆ ಬರತೊಡಗಿದರು. ನಂತರ ಸಮಾಜದ ಅಭಿವೃದ್ಧಿಯಾದಂತೆ ಮಠ ಪರಂಪರೆಯ ೧೮ನೇ ಯತಿವರ್ಯ ಶ್ರೀ ಪೂರ್ಣಪ್ರಜ್ಞ ತೀರ್ಥರು ಶಕ ೧೭೬೨ ಶಾರ್ವರಿ ಸಂವತ್ಸರ. (ಸನ್ ೧೮೪೧)ರಲ್ಲಿ ಹಿಂಭಾಗದಲ್ಲಿದ್ದ ಮಂದಿರವನ್ನು ಮುಂಭಾಗದ ಈಗಿನ ರಥ ಬೀದಿಯ ಬಳಿ ಸ್ಥಳಾಂತರಿಸಲು ಶಿಲಾನ್ಯಾಸ ಮಾಡಿದರು. ಶಕ ೧೭೬೪ ಶುಭಕೃತ ಸಂವತ್ಸರ. ಫಾಲ್ಗುಣ ಶುದ್ಧ ದಶಮಿ (೧೧-೦೩-೧೮೪೩) ಶನಿವಾರ ಮೀನಲಗ್ನದಲ್ಲಿ ಜೀರ್ಣೋದ್ಧಾರಿತ ಮಠದಲ್ಲಿ ಶ್ರೀ ವಿಟ್ಠಲ ದೇವರ ಪುನಃಪ್ರತಿಷ್ಠೆ ನೆರವೇರಿಸಿದರು. ಸ್ವರ್ಣಲೇಪಿತ ಶಿಖರಕಲಶ ಸ್ಥಾಪಿಸಿದರು. ದಕ್ಷಿಣಕನ್ನಡ ಭಾಗದಲ್ಲಿಯೇ ಸ್ವರ್ಣಕಲಶ ಹೊಂದಿದ ದೇವಾಲಯವೆಂಬ ಖ್ಯಾತಿ ಇದಕ್ಕಿದೆ. ಶ್ರೀ ಪದ್ಮನಾಭ ತೀರ್ಥ ಸ್ವಾಮಿಗಳು ಶ್ರೀ ಶಕೆ ೧೭೮೭ ರ ಕ್ರೋಧನ ಸಂವತ್ಸರ. (ಕ್ರಿ.ಶ ೧೮೬೫)ರಲ್ಲಿ ದಕ್ಷಿಣ ಭಾರತದ ರಾಮೇಶ್ವರ ಯಾತ್ರೆ ಪೂರೈಸಿ ಮಂಗಳೂರು ಮಠದಲ್ಲಿ ವಾಸ್ತವ್ಯ ಮಾಡಿದ್ದಾರೆ. ೧೮೭೮ನೇ ಇಸವಿಯ ಬಹುಧಾನ್ಯ ಸಂವತ್ಸರದಲ್ಲಿ ಕಾಶೀಮಠದ ೧೭ನೇ ಯತಿವರ್ಯ ಶ್ರೀ ಭುವನೇಂದ್ರ ತೀರ್ಥರು ತಮ್ಮ ಶಿಷ್ಯ ಶ್ರೀ ವರದೇಂದ್ರ ತೀರ್ಥರೊಂದಿಗೆ ಮಂಗಳೂರು ಗೋಕರ್ಣಮಠದಲ್ಲಿ ಚಾತುಮಾಸ್ಯವನ್ನು ಆಚರಿಸಿದ್ದಾರೆ. ಮಠಪರಂಪರೆಯ ೨೦ನೇ ಗುರವರ್ಯರಾದ ಶ್ರೀ ಇಂದಿರಾಕಾಂತ ತೀರ್ಥರು ಸನ್ ೧೯೧೧ರಂದು ಮಠದ ಮುಂಭಾಗದ ಅಂಬಲು ಹಾಗೂ ಪ್ರಾಸಾದವನ್ನು ಕಟ್ಟಿ ಮಠದವಾಸ್ತುವಿನ ಶೋಭೆಯನ್ನು ಹೆಚ್ಚಿಸಿದರು. ತಮ್ಮ ಮೊದಲ ಶಿಷ್ಯ ಶ್ರೀ ನರಹರಿ ತೀರ್ಥರೊಂದಿಗೆ ಸನ್ ೧೮೯೬ರಲ್ಲಿ ಚಾತುಮಾಸ ವೃತಾಚರಣೆ ಮಾಡಿದರು. ಕ್ರಿ.ಶ. ೧೯೪೮, ೧೯೪೯ ಮತ್ತು ೧೯೭೨ರಲ್ಲಿ ೨೨ನೇ ಗುರುವರ್ಯರಾದ ಶ್ರೀ ದ್ವಾರಕಾನಾಥ ತೀರ್ಥರು ಇಲ್ಲಿ ಚಾತುರ್ಮಾಸ ವೃತವನ್ನು ಆಚರಿಸಿದ್ದಾರೆ. ಗುರುವರ್ಯ ಶ್ರೀ ವಿದ್ಯಾಧಿರಾಜ ತೀರ್ಥರು (೨೩)ಮಠದ ಹಿಂಭಾಗದಲ್ಲಿದ್ದ ಸ್ಥಳದಲ್ಲಿ ಶ್ರೀದ್ವಾರಕಾನಾಥ ಸಭಾಮಂಟಪವನ್ನು ಕಟ್ಟಿಸಿ ೦೬-೦೯-೧೯೮೧ರಲ್ಲಿ ಅದರ ಉದ್ಘಾಟನೆ ನೆರವೇರಿಸಿದರು. ಮುಖ್ಯ ವಾಸ್ತುವನ್ನು ನವೀಕರಿಸಿ ಪ್ರಸ್ತುತ ಮುಂಭಾಗದಲ್ಲಿ ಕಾಣುವ ವಾಸ್ತುವನ್ನು ಕಟ್ಟಿ ೩೦-೦೧-೧೯೯೧ ರಂದು ಉದ್ಘಾಟಿಸಿದರು. ಮಠದ ಆವರಣದಲ್ಲಿ ೨೩-೧೧-೧೯೯೧ ನವಗೃಹ ಪ್ರತಿಮೆಯನ್ನು ಪ್ರತಿಷ್ಠಾಪಿಸಿದರು. ೧೯೯೨ರಲ್ಲಿ ಚಾತುರ್ಮಾಸ ವೃತವನ್ನು ಕೈಗೊಂಡಿದ್ದಾರೆ. ೨೦೧೬ರಲ್ಲಿ ಶ್ರೀ ಗಳವರ ಸುವರ್ಣ ಚಾತುರ್ಮಾಸ ಈ ಭಾಗದ ಸಮಸ್ಥ ಗೌಡಸಾರಸ್ವತ ಸಮಾಜಕ್ಕೆ ಗೌರವದ ಪ್ರತೀಕ.
ಮಂಗಳೂರು ಮಠ ವಾಸ್ತುವಿನ ವೈಶಿಷ್ಠ್ಯವೇನೆಂದರೆ ಸಂಪೂರ್ಣವಾಸ್ತು ಗೋವಾದ ಶಿಲ್ಪಕಾರರಿಂದ ಕಟ್ಟಲ್ಪಟ್ಟಿದ್ದು ನಿರ್ಮಾಣಕ್ಕೆ ತಗಲಿದ ಅಧಿಕಾಂಶ ಸಾಮಗ್ರಿಗಳನ್ನು ಗೋವಾದಿಂದ ಮಂಗಳೂರಿಗೆ ನಾವೆಗಳಿಂದ ತಂದುಕೊಳ್ಳಲಾಗಿತ್ತು.