Taking too long? Close loading screen.

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

18 Poornprajna Kannada

ಶ್ರೀ ಪೂರ್ಣಪ್ರಜ್ಞ ತೀರ್ಥರು

ಜನ್ಮ ಸ್ಥಳ : ಮುಡಗೇರಿ/ಶಿವೇಶ್ವರ (ಕಾರವಾರ)
ಜನ್ಮನಾಮ : ಗಣೇಶ ವಿಠ್ಠಲ ಭಟ್ಟ ಮಠಕರ
ಜನ್ಮತಿಥಿ : ಶ್ರೀ ಶಕೆ ೧೭೩೧ ಶುಕ್ಲ ಸಂವತ್ಸರ ಭಾದ್ರಪದ ಶುಕ್ಲ-೪ ಬುಧವಾರ (೧೩-೦೯-೧೮೦೯)
ಸಂನ್ಯಾಸದೀಕ್ಷೆ : ಶ್ರೀ ಶಕೆ ೧೭೪೬ ತಾರಣ ಸಂವತ್ಸರ ಚೈತ್ರ ಶುಕ್ಲ-೧೫ ಮಂಗಳವಾರ (೧೩-೦೪-೧೮೨೪)
ದೀಕ್ಷಾ ಸ್ಥಳ : ಶ್ರೀ ಜೀವೋತ್ತಮ ಮಠ ಗೋಕರ್ಣ.
ದೀಕ್ಷಾಗುರು : ಶ್ರೀ ಆನಂದ ತೀರ್ಥರು (೧೭)
ಗುರು ಪೀಠಾರೋಹಣ : ಶ್ರೀ ಶಕೆ ೧೭೫೦ ಸರ್ವಧಾರಿ ಸಂವತ್ಸರ ಶ್ರಾವಣ ಕೃಷ್ಣ-೫ ಶುಕ್ರವಾರ (೨೯-೦೮-೧೮೨೮)
ಶಿಷ್ಯ ಸ್ವೀಕಾರ : ಶ್ರೀ ಪದ್ಮನಾಭ ತೀರ್ಥರು (೧೯)

ಮಹಾನಿರ್ವಾಣ : ಶ್ರೀ ಶಕೆ ೧೮೦೧ ಪ್ರಮಾಥಿ ಸಂವತ್ಸರ ಜ್ಯೇಷ್ಠ ಶುಕ್ಲ-೨ ಶುಕ್ರವಾರ (೨೩-೦೫-೧೮೭೯)
ವೃಂದಾವನ ಸ್ಥಳ : ಪರ್ತಗಾಳಿ ಮಠ
ಶಿಷ್ಯ ಕಾಲಾವಧಿ : ೦೪ ವರ್ಷಗಳು ೦೪ ತಿಂಗಳು ೧೭ ದಿನಗಳು
ಗುರುಪೀಠ ಕಾಲಾವಧಿ : ೫೦ ವರ್ಷ ೦೮ ತಿಂಗಳು ೨೯ ದಿನಗಳು
ಮಠಸೇವಾ ಕಾಲಾವಧಿ : ೫೫ ವರ್ಷ ೦೨ ತಿಂಗಳು ೧೧ ದಿನಗಳು
ಆಯುರ್ಮಾನ : ೬೯ ವರ್ಷ ೦೯ ತಿಂಗಳು ೧೧ ದಿನಗಳು
ಮಠ ಸ್ಥಾಪನೆ : ಕುಂಕಳ್ಯೆ ೧೮೮೦ ಶ್ರೀ ವೀರ ವಿಠ್ಠಲ ಶಿಲಾ ವಿಗ್ರಹ.

ಸ್ವಾಮೀಜಿಯ ಇತಿಹಾಸ

ಪೀತ್ವಾ ಸಮ್ಯಕ್ಷುಧಾಸಾರಂ ಚರಿತ್ವಾ ವಸುಧಾತಲಮ್ ।
ವಾದಿವರ ಜಿತ ಯೇನ ಪೂರ್ಣಪ್ರಜ್ಞಾಗುರು ಭಜೇ ।।
ಶ್ರೀ ಪೂರ್ಣಪ್ರಜ್ಞ ತೀರ್ಥರ ಪೂರ್ವಾಶ್ರಮದ ನಾಮಧೇಯ ಗಣಪತಿ ಭಟ್ಟ ಮಠಕರ. ಕಾರವಾರ ತಾಲೂಕಿನ ಮೂಡಗೇರಿ
ಮಠದ ವಿಠ್ಠಲ ಭಟ್ಟ ಮಠಕರ ಇವರ ದ್ವಿತೀಯ ಪುತ್ರ. ಗುರುವರ್ಯ ಶ್ರೀ ಆನಂದತೀರ್ಥರಿಂದ (೧೭) ಗೋಕರ್ಣ ಮಠದಲ್ಲಿ ಸಂನ್ಯಾಸ
ದೀಕ್ಷೆ ಪಡೆದರು. ಶಕೆ ೧೭೫೦ ರಲ್ಲಿ ಶ್ರೀ ಆನಂದ ತೀರ್ಥರು ವೃಂದಾವನಸ್ತರಾದ ನಂತರ ಅವರ ಪಟ್ಟಾಭಿಷೇಕವಾಯಿತು. ಅವರು
ಸುಮಾರು ೫೦ ವರ್ಷಗಳ ಸುದೀರ್ಘ ಕಾಲ ಗುರುಪೀಠದಲ್ಲಿ ವಿರಾಜಿತರಾಗಿದ್ದರು.
ಶ್ರೀಪೂರ್ಣಪ್ರಜ್ಞ ತೀರ್ಥರು ಸ್ವತಃ ಅಧ್ಯಯನದಲ್ಲಿ ಸಾಕಷ್ಟು ಸಮಯವನ್ನು ಕಳೆದರು. ಅವರು ಶ್ರೀ ಮಧ್ವಾಚಾರ್ಯರ
ಬ್ರಹ್ಮಸೂತ್ರಗಳ ಆಳವಾದ ಜ್ಞಾನವನ್ನು ಹೊಂದಿದ್ದರು. ಶ್ರೀಮನ್ ಮದ್ವಾಚಾರ್ಯರ ಇತರ ಗ್ರಂಥಗಳನ್ನೂ ಸಹ ಅಧ್ಯಯನ
ಮಾಡಿದ್ದರು ಮತ್ತು ಅವರು ಇತರ ವಿದ್ವಾಂಸರಿಗೆ ಪಾಠಗಳನ್ನು ಸಹ ನೀಡುತ್ತಿದ್ದರು.
ಶ್ರೀಪೂರ್ಣಪ್ರಜ್ಞತೀರ್ಥರು ಆ ಕಾಲಕ್ಕೆ ಸುತ್ತಲಿನ ಪರಿಸರದಲ್ಲಿ ಬಹಳ ವಿರಕ್ತ ವಿದ್ವಾಂಸರೆಂದು ಮಾನ್ಯತೆಯನ್ನು
ಹೊಂದಿದ್ದರು. ಮೊದಲು ಶ್ರೀ ಆನಂದತೀರ್ಥರಲ್ಲಿ ಅವರು ಅಧ್ಯಯನ ನಡೆಸಿ ನಂತರ ಕಾಶಿಯ ಪಂಡಿತರಲ್ಲಿ ಅಧ್ಯಯನ
ಮಾಡಿದ್ದಲ್ಲದೆ ತಮ್ಮ ಸ್ವಂತ ಪರಿಶ್ರಮದಿಂದ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡರು. ಈ ಆಧ್ಯಾತ್ಮಿಕ ಜ್ಞಾನದಿಂದ ಅವರು ಸ್ವಯಂ-
ಕೇಂದ್ರಿತರಾಗಲಿಲ್ಲ. ನಾವು ಗೌಡ ಸಾರಸ್ವತ ಬ್ರಾಹ್ಮಣ ಸಂಪ್ರದಾಯದ ಪ್ರತಿನಿಧಿಗಳು ಮತ್ತು ನಾವು ನಮ್ಮ ಜ್ಞಾನವನ್ನು ನಮ್ಮ
ಸಮಾಜಕ್ಕಾಗಿ ಬಳಸಬೇಕು, ಇದಕ್ಕಾಗಿ ನಮ್ಮ ಆಧೀನದಲ್ಲಿರುವ ಅಧಿಕಾರ ಮತ್ತು ಸಾಧನದ ಸದುಪಯೋಗ ಮಾಡಿಕೊಳ್ಳಬೇಕು
ಎಂಬದನ್ನು ಅರಿತುಕೊಂಡಿದ್ದರು. ಅದಕ್ಕಾಗಿಯೇ ಅವರು ತಮ್ಮ ಹೆಚ್ಚಿನ ಸಮಯವನ್ನು ಅನೇಕರಿಗೆ ಶಿಕ್ಷಣ ನೀಡಲು ಮೀಸಲಿಟ್ಟರು.
೧೯೯೯ ರಲ್ಲಿ ಅವರು ಪೈಂಗಿಣಿಯಲ್ಲಿರುವ ಪರಶುರಾಮ ದೇವಾಲಯದಲ್ಲಿ ಸಹಸ್ರಬ್ರಾಹ್ಮಣ ಸಂತರ್ಪಣೆ ಮಾಡಿದರು. ಮಾಶೆಯ
ನಿರಾಕಾರ ದೇವಾಲಯದ ಹಿಂಭಾಗದಲ್ಲಿ ತೊರೆಯ ಮೇಲೆ ಸೇತುವೆಯನ್ನು ನಿರ್ಮಿಸಿದರು. ಅವರು ಪೈಂಗಿಣಿಯಲ್ಲಿ ನಾರಾಯಣ
ದೇವಸ್ಥಾನದ ಬಳಿ ನದಿಗೆ ಸೇತುವೆಯನ್ನು ನಿರ್ಮಿಸಿದರು. ಹೀಗೆ ಅನೇಕ ಜನೋಪಯೋಗಿ ಕಾರ್ಯವನ್ನು ಮಾಡಿದ್ದಾರೆ.
ಶ್ರೀ ಪೂರ್ಣಪ್ರಜ್ಞ ತೀರ್ಥರು ತೀರ್ಥಯಾತ್ರೆಯಲ್ಲಿ ಕೆಲಕಾಲ ಕಳೆದರು. ಒಂದು ತೀರ್ಥಯಾತ್ರೆಯಲ್ಲಿ ಅವರು ಬಹುತೇಕ ಇಡೀ
ಭಾರತದ ಸಂಚಾರಮಾಡಿದ್ದಾರೆ. ಈ ಯಾತ್ರೆ ಅವರಿಗೆ ಮೂರು ವರ್ಷಗಳ ಸುದೀಘಕಾಲ ತೆಗೆದುಕೊಂಡಿತು. ಅವರು ೧೭೮೧-೮೨ರ
ಸುಮಾರಿಗೆ ಈ ಯಾತ್ರೆಯನ್ನು ಆರಂಭಿಸಿರಬೇಕು. ಏಕೆಂದರೆ ಅವರು ಶಕೆ ೧೭೮೪ರ ಮಾರ್ಗಶಿರ್ಷ ಮಾಸದಲ್ಲಿ ಪುಣೆಗೆ
ಹಿಂತಿರುಗುತ್ತಿದ್ದರು ಎಂದು ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ. ಅವರು ಮೊದಲು ದಕ್ಷಿಣ ಭಾರತಕ್ಕೆ ಪ್ರಯಾಣಿಸಿದರು. ಶ್ರೀಶೈಲ,
ತಿರುಪತಿ, ಕಂಚಿ, ರಾಮೇಶ್ವರ, ಕನ್ಯಾಕುಮಾರಿಯಿಂದ ಅವರು ತಿರುವನಂತಪುರಕ್ಕೆ ಬಂದರು ಮತ್ತು ಪಶ್ಚಿಮ ಕರಾವಳಿಯ
ಮಾರ್ಗದಲ್ಲಿ ಅವರು ಪರ್ತಗಾಳಿಗೆ ಮರಳಿದರು. ನಂತರದ ತೀರ್ಥಯಾತ್ರೆಯಲ್ಲಿ ಮೊದಲು ಕೊಲ್ಹಾಪುರಕ್ಕೆ ಹೋಗಿ ಮಾತಾ
ಅಂಬಾಬಾಯಿಯ ದರ್ಶನ ಪಡೆದರು. ನಂತರ ಅವರು ನಾಸಿಕನಿಂದ ಪ್ರಯಾಗ ಕ್ಷೇತ್ರಕ್ಕೆ ಹೋದರು. ಅಲ್ಲಿ ಸಂಗಮದಲ್ಲಿ ಸ್ನಾನ ಮಾಡಿ
ಕಾಶಿಕ್ಷೇತ್ರಕ್ಕೆ ಹೋಗಿ ವಾರಣಾಸಿಮಠದಲ್ಲಿ ವಾಸ್ತವ್ಯ ಮಾಡಿದರು. ಈ ವಾಸ್ತವ್ಯದಲ್ಲಿ ಅವರು ತ್ರಿಕಾಲ ಗಂಗೆಯಲ್ಲಿ ಸ್ನಾನ
ಮಾಡುತ್ತಿದ್ದರು. ವಾರಣಾಸಿ ಮಠದಲ್ಲಿ ಸಹಸ್ರ ಬ್ರಾಹ್ಮಣ ಭೋಜನವನ್ನು ಮಾಡಿಸಿದ್ದಲ್ಲದೆ ಪ್ರತಿನಿತ್ಯ ೧೨ ಬ್ರಾಹ್ಮಣರ
ಭೋಜನಕ್ಕೆ ತಗಲುವ ವೆಚ್ಚಕ್ಕಾಗಿ ಕಾಶಿಯ ರಾಜನಲ್ಲಿ ಧನವನ್ನು ಠೇವಣಿಯನ್ನಾಗಿರಿಸಿ ಆ ಧನದಿಂದ ಬರುವ ಬಡ್ಡಿಯಿಂದ
ಬ್ರಾಹ್ಮಣರಿಗೆ ಪ್ರತಿದಿನ ಭೋಜನವನ್ನು ಮಾಡಿಸುವ ವ್ಯವಸ್ಥೆ ಮಾಡಿಸಿದರು.
ಕಾಶಿಯಲ್ಲಿ ಇರುವ ವಿದ್ವಾನ ಬ್ರಾಹ್ಮಣರನ್ನೆಲ್ಲ ಕರೆಸಿ ಅವರಲ್ಲಿ ಪರಾಮರ್ಶೆಮಾಡಿ ಅವರಿಗೆ ದಕ್ಷಿಣೆ ನೀಡಿದರು. ಶ್ರೀ
ಪೂರ್ಣಪ್ರಜ್ಞ ತೀರ್ಥರ ಐವತ್ತು ವರ್ಷಗಳ ಸುದೀರ್ಘ ಕಾಲಾವಧಿಯಲ್ಲಿ ಮಠದ ದಿನನಿತ್ಯದ ಕಾರ್ಯಚಟುವಟಿಕೆಗಳ ಮೇಲೆ ಅವರ
ಹೆಚ್ಚಿನ ಗಮನ ಇರುತ್ತಿರಲಿಲ್ಲ. ಆದ್ದರಿಂದ ಶಿಷ್ಯ ಶ್ರೀ ಪದ್ಮನಾಭತೀರ್ಥರು ಮಠದ ನಿರ್ವಹಣೆಯಲ್ಲಿ ಸಾಕಷ್ಟು ಸಹಾಯ

ಮಾಡಿದರು. ಅವರ ಅಧಿಕಾರಾವಧಿಯಲ್ಲಿ ಸಂಸ್ಥಾನದ ಆರ್ಥಿಕ ಸ್ಥಿತಿ ಸುಧಾರಿಸಿದ್ದು, ಕೆಲವು ಜಮೀನುಗಳನ್ನು ದಾನವಾಗಿ ಬಂದವು
ಮತ್ತು ಕೆಲವು ಜಮೀನುಗಳನ್ನು ಖರೀದಿಸಲಾಯಿತು. ಶ್ರೀ ಪೂರ್ಣಪ್ರಜ್ಞ ತೀರ್ಥರೇ ಮೂರು ಜಮೀನು ಖರೀದಿಸಿರುವುದು
ದಾಖಲಾಗಿದ್ದು, ಶಿಷ್ಯಸ್ವಾಮಿ ಅವರೇ ಹೆಚ್ಚು ಜಮೀನು ಖರೀದಿಸಿರುವುದು ದಿನವಹಿಯಿಂದ ಕಂಡು ಬರುತ್ತದೆ.
ಗೋಕರ್ಣ ಪರ್ತಗಾಳಿ ಮಠದ ಇತಿಹಾಸದಿಂದ ಕಂಡುಬರುವದೇನೆಂದರೆ ಈ ಮಠವು ಗುರುಪೀಠವಾಗಿದ್ದು, ಈ ಪೀಠದ
ಆಂತರಿಕ ಮತ್ತು ಬಾಹ್ಯ ವ್ಯವಹಾರಗಳನ್ನು ಗುರುಪೀಠದಲ್ಲಿರುವ ಸ್ವಾಮಿಜೀಯವರು ನಿರ್ವಹಿಸುತ್ತಾರೆ ಅಲ್ಲದೆ ಧಾರ್ಮಿಕ
ಹಕ್ಕುಗಳು ಅವರ ಸ್ವಯಂಭೂ ಅಧಿಕಾರವಾಗಿದೆ. ಆದಿಲ್ ಶಾಹಿಯಿಂದ ಬ್ರಿಟೀಷರವರೆಗಿನ ಆಳ್ವಿಕೆಯಲ್ಲಿ, ಸರ್ಕಾರ ಮತ್ತು
ನ್ಯಾಯಾಲಯದ ನಡುವೆ ಭೂಮಿ ಅಥವಾ ಮಠದ ಗೌರವ-ಘನಸ್ಥಿಕೆ ಅಥವಾ ಇತರ ಆರ್ಥಿಕ ವಿಷಯಗಳ ಬಗ್ಗೆ ಪತ್ರವ್ಯವಹಾರವಿತ್ತು.
ಅಥವಾ ಸರಕಾರಕ್ಕೆ ದೂರುಗಳು, ಅರ್ಜಿ ಸಲ್ಲಿಸುವದಿದ್ದರೆ ಅವರು ಅದನ್ನು ಸ್ವತಃ ಮಾಡುತ್ತಿದ್ದರು ಅಥವಾ ಅವರು ಪವರ್ ಆಫ್
ಅಟಾರ್ನಿ ನೀಡಿದ ಜನರು ಮಾಡುತ್ತಿದ್ದರು. ಕಾಣಕೊಣದಲ್ಲಿ ಪೋರ್ಚುಗೀಸರ ಆಳ್ವಿಕೆಯು ಪ್ರಾರಂಭವಾಯಿತು ಮತ್ತು ಸುಮಾರು
ಐವತ್ತು ವರ್ಷಗಳ ನಂತರ ಸರ್ಕಾರವು ಪರ್ತಗಾಳಿ ಮಠದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸಿತು. ಹೀಗೊಂದು ಪ್ರಶ್ನೆ
ಉದ್ಭವಿಸಿತು ಅದೇನೆಂದರೆ ಪರ್ತಗಾಳಿ ಮಠವು ಸ್ವಾಮಿಯವರ ಸ್ವತಹದ್ದೋ ಅಥವಾ ಹತ್ತು ಸಮಸ್ಥರ ಒಡೆತನದ್ದೊ? ಕೆಲವು
ಕುತಂತ್ರಿಗಳು ಪೋರ್ಚುಗೀಸ ಸರಕಾರಕ್ಕೆ ದೂರು ಬರೆದು ಮಠದ ಮಹಾಜನರಿಗೆ ಮಠದ ಮೇಲೆ ಹಕ್ಕಿದೆ ಎಂದು ಸೂಚಿಸಿದರು. ಶಕೆ
೧೭೬೮ (ಕ್ರಿಶ ೧೮೪೬)ರಲ್ಲಿ ಈ ವಿಷಯದ ವಿಚಾರಣೆಯನ್ನು ಪ್ರಾರಂಭಿಸಲಾಯಿತು ಮತ್ತು ಶಕೆ ೧೭೭೪ ರಲ್ಲಿ ಮಠದ ಆಡಳಿತವನ್ನು
ನಡೆಸಲು ಸಮಿತಿಗಳನ್ನು ನೇಮಿಸುವುದಾಗಿ ಸರ್ಕಾರ ಎರಡುಸಲ ಘೋಷಿಸಿತು. ಈ ನಿಟ್ಟಿನಲ್ಲಿ ಸರ್ಕಾರದ ನಿರ್ಧಾರವನ್ನು ೧೭ ಮೇ
೧೮೫೨ ರಂದು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಲಾಯಿತು. ನಂತರ ೧೮೬೬ ರಲ್ಲಿ ಗೋವಾದಲ್ಲಿ ದೇವಾಲಯಗಳ ಬಗ್ಗೆ ಕಾನೂನು
ಜಾರಿಗೆ ಬಂದಿತು. ಈ ಮಠವು ಯಾವುದೇ ನಿರ್ದಿಷ್ಟ ಮಹಾಜನ ಮಂಡಳಿಗೆ ಸೇರಿಲ್ಲ, ಆದರೆ ಸಾರಸ್ವತ ಬ್ರಾಹ್ಮಣರ ಎಲ್ಲಾ ವೈಷ್ಣವ
ಪಂಥಗಳಿಗೆ ಸೇರಿದ್ದು ಪೀಠಾದಿಷ್ಠ ಗುರುವರ್ಯರು ಆ ಸಂಪ್ರದಾಯದ ಪೀಠಾಧಿಪತಿಯಾಗಿ ಮಠದ ನಿರ್ವಹಣೆ ಮಾಡುತ್ತಿರುವದಾಗಿ
ತಿಳಿಸಿದರು. ಈ ಎಲ್ಲಾ ಪ್ರಕರಣಗಳು ಪೋರ್ಚುಗಲ್‌ಗೆ ತಲುಪಿತು ಮತ್ತು ದೇವಾಲಯದ ಕಾನೂನನ್ನು ಪರ್ತಗಾಳಿ ಮಠಕ್ಕೆ
ಅನ್ವಯಿಸಬಾರದು ಎಂದು ಅಂತಿಮವಾಗಿ ನಿರ್ಣಯ ನೀಡಲಾಯಿತು. ಅಷ್ಟೊತ್ತಿಗಾಗಲೇ ಶ್ರೀಪೂರ್ಣಪ್ರಜ್ಞ ತೀರ್ಥರು
ವೃಂದಾವನಸ್ಥರಾಗಿದ್ದು ಅವರ ಸ್ಥಾನಕ್ಕೆ ಶ್ರೀ ಪದ್ಮನಾಭತೀರ್ಥರು ಪೀಠಾಧಿಪತಿಯಾಗಿದ್ದರು.
ಶ್ರೀಶಕೆ ೧೮೦೧ ಪ್ರಮಾಥಿ ಸಂವತ್ಸರದ ಜ್ಯೇಷ್ಠ ಶುಕ್ಲ ದ್ವಿತೀಯಾದಂದು ಅವರು ಪರ್ತಗಾಳಿ ಮಠದಲ್ಲಿ
ಮೋಕ್ಷಾರೂಢರಾದರು. ಅವರ ವೃಂದಾವನ ಪರ್ತಗಾಳಿ ಮಠದಲ್ಲಿದೆ.